ಬಿತ್ತನೆ ಬೀಜ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

21

Get real time updates directly on you device, subscribe now.


ತುಮಕೂರು: ಬಿತ್ತನೆ ಬೀಜದ ದರ ಏರಿಕೆ ಸೇರಿದಂತೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಶುಕ್ರವಾರ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಮಳೆಗಾಲ ಆರಂಭವಾಗಿ ರೈತರು ಕೃಷಿ ಬಿತ್ತನೆ ಆರಂಭಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿತ್ತನೆ ಬೀಜಗಳ ಬೆಲೆಯನ್ನು ಶೇಕಡ 60 – 70ರಷ್ಟು ಏರಿಕೆ ಮಾಡಿದೆ, ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲು ರಾಜ್ಯ ಸರ್ಕಾರ ರೈತರ ಜೇಬಿಗೆ ಕೈ ಹಾಕಿದೆ ಎಂದು ಆಪಾದಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳಿನಿಂದ ರೈತರ ಪರವಾದ ಯಾವ ಯೋಜನೆ ರೂಪಿಸಿಲ್ಲ, ಹಿಂದಿನ ಬಿಜೆಪಿ ಸರ್ಕಾರದ ರೈತ ಯೋಜನೆ ಮುಂದುವರೆಸದೆ ಸ್ಥಗಿತಗೊಳಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ, ಇಂತಹ ಸರ್ಕಾರದ ವಿರುದ್ಧ ರಾಜ್ಯದ ರೈತರು ಸಿಡಿದೆದ್ದಿದ್ದಾರೆ, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮಂತ್ರಿಗಳಿಗೆ ಘೇರಾವ್ ಮಾಡಿ ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮಳೆ ಕೊರತೆ, ಅಸಮರ್ಪಕ ಬೆಳೆ ಪರಿಹಾರ, ಪರಿಹಾರದ ಹಣ ಸಾಲಕ್ಕೆ ಜಮಾ ಆಗುವುದೂ ಸೇರಿದಂತೆ ರೈತರು ವಿವಿಧ ರೀತಿಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ, ಗಾಯದ ಮೇಲೆ ಉಪ್ಪು ಸುರಿದಂತೆ ಸರ್ಕಾರ ಬಿತ್ತನೆ ಬೀಜಗಳ ಬೆಲೆ ವಿಪರೀತವಾಗಿ ಹೆಚ್ಚಳ ಮಾಡಿದೆ, ಕೃಷಿ ಉಪಕರಣಗಳ ಸಹಾಯಧನ ಬಿಡುಗಡೆ ಮಾಡಿಲ್ಲ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲಿಕಿಸಿದೆ ಎಂದು ಬ್ಯಾಟರಂಗೇಗೌಡ ದೂರಿದರು.

ಕಾಂಗ್ರೆಸ್ ಸರ್ಕಾರ ಇದೂವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಆರಂಭಿಸಿಲ್ಲ, ಶಾಸಕರಿಗೂ ಅನುದಾನ ನೀಡಿಲ್ಲ, ಎಸ್ ಸಿ- ಎಸ್ ಟಿ ಸಮಾಜದ ಅಭಿವೃದ್ಧಿಯ ಹಣವನ್ನು ನಕಲಿ ಖಾತೆ ಸೃಷ್ಟಿಸಿ ವರ್ಗಾವಣೆ ಮಾಡಿಕೊಂಡು ಲೂಟಿ ಮಾಡಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸರ್ಕಾರ ಬಳಕೆ ಮಾಡಿಕೊಂಡಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಈ 13 ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕಾಗಿದ್ದ ಸರ್ಕಾರ ರೈತರ ಹಣವನ್ನೂ ಬಿಡದೆ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಹೊರಟಿದೆ, ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಬಡತನ ದುರುಪಯೋಗ ಪಡಿಸಿಕೊಂಡು ಚುನಾವಣೆಯಲ್ಲಿ ಮತ ಗಳಿಸಲು ಹೊರಟಿದೆ, ಹಾಲು ಉತ್ಪಾದಕರಿಗೆ ನೀಡಬೇಕಾದ 700 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ ಎಂದರು.

ಬಿತ್ತನೆ ಮಾಡುವ ಸಂದರ್ಭದಲ್ಲಿ ಸರ್ಕಾರ ಬಿತ್ತನೆ ಬೀಜದ ಬೆಲೆ ಹೆಚ್ಚಳ ಮಾಡಿ, ರೈತರು ಬಿತ್ತನೆ ಬೀಜ ಖರೀದಿಸಲೂ ಸಾಲ ಮಾಡುವಂತಹ ಪರಿಸ್ಥಿತಿಗೆ ತಂದಿದೆ, ಕೂಡಲೇ ಬಿತ್ತನೆ ಬೀಜದ ಬೆಲೆ ಇಳಿಸಬೇಕು, ರೈತಪರ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ ಅವರು ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ರೈತರು ಗ್ರಾಮ ಪಂಚಾಯಿತಿ ಮಟ್ಟದಿಂದ ಹೋರಾಟ ಆರಂಭಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಪ್ರಧಾನ ಕಾರ್ಯರ್ಶಿ ರವೀಂದ್ರ, ಹೆಚ್.ಬಿ.ಸಿದ್ಧರಾಮಯ್ಯ, ಉಪಾಧ್ಯಕ್ಷ ತಿರುಮಲೇಶ್, ರಾಮಲಿಂಗಯ್ಯ, ಗುಬ್ಬಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಗೌಡ, ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಮಧುಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ನಗರ ಬಿಜೆಪಿ ಅಧ್ಯಕ್ಷ ಹನುಮಂತರಾಜು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಪ್ರಧಾನ ಕಾರ್ಯದರ್ಶಿ ಧನುಷ್, ನಗರ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಮುಖಂಡರಾದ ಜಯಣ್ಣ, ಹನುಮಂತರಾಯಪ್ಪ, ತಿಮ್ಮಣ್ಣ, ಹನುಮಂತರಾಜು, ಬಂಬೂ ಮೋಹನ್, ಗಣೇಶ್ ಪ್ರಸಾದ್, ಜಿ.ಎಸ್.ನಂದಿನಾಥ್ ಮೊದಲಾದವರು ಭಾಗವಹಿಸಿದ್ದರು. ನಂತರ ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!