ಪರಿಸರ ಉಳಿದರೆ ಜೀವನ ಸುಖಮಯ

ಎಲ್ಲರೂ ಉಳಿಯಬೇಕು ಎಂಬ ತತ್ವ ಪಾಲಿಸಿ: ನ್ಯಾ.ಜಯಂತ್

18

Get real time updates directly on you device, subscribe now.

ತುಮಕೂರು: ಪರಿಸರ ಉಳಿಸಿ ಬೆಳೆಸಿದಾಗ ಮಾತ್ರ ಮುಂದಿನ ಪೀಳಿಗೆಯ ಜೀವನ ಸುಖಮಯವಾಗಿರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಿರಾಗೇಟ್ ಸಮೀಪವಿರುವ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ತುಮಕೂರು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ, ತುಮಕೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ಉಳಿಯಬೇಕು, ಬೇರೆಯವರನ್ನು ಉಳಿಸಬೇಕು ಎಂಬ ತತ್ವದಂತೆ ಜೀವನ ಸಾಗಿಸಬೇಕು, ಎಲ್ಲಾ ಮಕ್ಕಳು ಸಸಿಗಳನ್ನು ನೆಡುವುದರ ಮೂಲಕ ಪರಿಸರ ಉಳಿಸಿ ಬೆಳೆಸಬೇಕು, ಶಾಲೆಯು ಉತ್ತಮ ವಾತಾವರಣ ಹೊಂದಿದೆ, ಮಕ್ಕಳಿಗೆ ಕಲಿಕೆಗೆ ಪೂರಕವಾಗಿದೆ, ಇಂತಹ ವಾತಾವರಣದಲ್ಲಿ ಕಲಿತ ಮಕ್ಕಳು ದೇಶಕ್ಕೆ ಉತ್ತಮ ಆಸ್ತಿಯಾಗುತ್ತಾರೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಮಾತನಾಡಿ, ಪರಿಸರದೊಂದಿಗೆ ನಮ್ಮ ಜೀವನ ಹೊಂದಾಣಿಕೆಯಾಗಬೇಕು, ನಾವುಗಳು ಬದುಕಬೇಕಾದರೆ ಉಸಿರಾಟ ನಡೆಸಬೇಕಾದರೆ ಗಾಳಿಯ ಅವಶ್ಯಕತೆ ಇದೆ, ಉತ್ತಮ ಗಾಳಿ ದೊರೆಯಬೇಕಾದರೆ ಪ್ರತಿಯೊಬ್ಬರೂ ಗಿಡ ನೆಡಬೇಕು, ಗಿಡಗಳು ಇರುವುದರಿಂದ ಈ ಶಾಲೆಯ ವಾತಾವರಣ ಸುಂದರ ಮತ್ತು ಆಶಾದಾಯಕವಾಗಿದೆ, ಇಂತಹ ವಾತಾವರಣದಲ್ಲಿ ಕಲಿತ ಮಕ್ಕಳು ಉತ್ತಮ ಮೌಲ್ಯ ಬೆಳೆಸಿಕೊಳ್ಳುತ್ತಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ ಮಾತನಾಡಿ, ಧರ್ಮೋ ರಕ್ಷಿತಿ ರಕ್ಷಿತಂ ಎಂಬ ವೃಕ್ಷೋ ರಕ್ಷಿತಿ ರಕ್ಷಿತಂ, ಯಾರು ವೃಕ್ಷವನ್ನು ರಕ್ಷಣೆ ಮಾಡುತ್ತಾರೋ ಅವರನ್ನು ವೃಕ್ಷಗಳು ರಕ್ಷಣೆ ಮಾಡುತ್ತವೆ, ಬಹಳ ಹಿಂದಿನ ಕಾಲದಿಂದಲೂ ನಮ್ಮ ಜನ ಗಿಡ ಮರಗಳನ್ನು ರಕ್ಷಣೆ ಮಾಡಿದ್ದರು, ಇದರಿಂದ ನೆರಳು, ಮಳೆ ಉತ್ತಮ ಮಳೆ ಬೆಳೆಗಳು ಆಗುತ್ತಿತ್ತು, ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯ ತನ್ನ ಉಳಿವಿಗಾಗಿ ಗಿಡ ಮರಗಳನ್ನು ನಾಶ ಮಾಡುತ್ತಾ ಬಂದಿದ್ದಾನೆ, ಆದ್ದರಿಂದ ನಮಗೆ ಮಳೆ ಹಾಗೂ ಆಹಾರದ ಕೊರತೆ ಎದುರಾಗುತ್ತಿದೆ, ಉಸಿರಾಟಕ್ಕೆ ಬೇಕಾದ ಆಮ್ಲಜನಕದ ಕೊರತೆ ಉಂಟಾಗಿದೆ, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಮ್ಲಜನಕ ಖರೀದಿಸುವ ಕಾಲ ದೂರವಿಲ್ಲ ಎಂದರು.

ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಗಿಡ ಮರ ಬೆಳೆಸಿ, ಪೋಷಿಸುವ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಡಿ.ಎಸ್.ಶಿವಸ್ವಾಮಿ ಮಾತನಾಡಿ, ಶಾಲಾ ಆವರಣದಲ್ಲಿ ಗಿಡಗಳಿಂದ ಶಾಲೆಯು ಸೌಂದರ್ಯಕ್ಕೆ ಕಾರಣವಾಗಿದೆ, ಶಾಲೆಯಲ್ಲಿ ಉತ್ತಮ ವಾತಾವರಣದಲ್ಲಿ ಇರಬೇಕಾದರೆ ಶಾಲೆಯ ಮೈದಾನದಲ್ಲಿ ಉತ್ತಮ ಪರಿಸರ ಬೇಕು, ಉತ್ತಮ ಪರಿಸರ ಇರಬೇಕಾದರೆ ಗಿಡ ಮರಗಳನ್ನು ಬೆಳೆಸಬೇಕು, ಪರಿಸರದಿಂದ, ಪರಿಸರಕ್ಕಾಗಿ, ಪರಿಸರಕ್ಕೋಸ್ಕರ ನಾವು ನೀವು ಬದುಕಬೇಕು, ಉತ್ತಮ ಜೀವನದ ಮೌಲ್ಯಗಳ ಮೂಲಕ ಪರಿಸರ ರಕ್ಷಣೆಯ ಹೊಣೆ, ಜವಾಬ್ದಾರಿ ನಮ್ಮದಾಗಿದೆ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಸಿ.ಶಿವಮೂರ್ತಿ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ 2024 ರ ಘೋಶವಾಕ್ಯ ಭೂ ಮರು ಸ್ಥಾಪನೆ, ಮರು ಭೂಮಿಕರಣ ಹಾಗೂ ಬರ ತಡೆಯುವಿಕೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕ ವರ್ಗ ಮತ್ತು ಮಕ್ಕಳು, ಉಪ ಪರಿಸರ ಅಧಿಕಾರಿ ಹೆಚ್.ವಿ.ಪಲ್ಲವಿ, ಶಿಕ್ಷಕ ಪಿ.ಜಿ.ತಿಮ್ಮೇಗೌಡ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!