ಕುಣಿಗಲ್: ಯಾವುದೂ ಶಾಶ್ವತವೂ ಅಲ್ಲ, ಹೀಗಾಗಿ ಮನುಷ್ಯ ಜೀವಿತಾವಧಿಯಲ್ಲಿ ಧರ್ಮಾಚರಣೆಯಲ್ಲಿ ನಡೆದು ಸೇವೆ ಮಾಡುವ ಮೂಲಕ ಜೀವನ ಸಾರ್ಥಕತೆ ಹೊಂದಬೇಕೆಂದು ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠಾಧ್ಯಕ್ಷ ನಂಜವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಹುಲಿಯೂರು ದುರ್ಗದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿ ಟ್ರಸ್ಟ ವತಿಯಿಂದ ನೂತನವಾಗಿ ಸೀತಾ ರಾಮ ಲಕ್ಷ್ಮಣ ಸಹಿತ ಆಂಜನೇಯ ಸ್ವಾಮಿ ಹಾಗೂ ಗುರು ರಾಘವೇಂದ್ರ ಸ್ವಾಮಿಗಳ ವಿಗ್ರಹ ಪ್ರತಿಷ್ಠಾಪನೆ ಹಾಗೂ ರಾಘವೇಂದ್ರ ಸ್ವಾಮಿ ಧ್ಯಾನ ಮಂದಿರ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಧಾರ್ಮಿಕ ಕೇಂದ್ರಗಳು ಹೆಚ್ಚು ಹೆಚ್ಚು ಸ್ಥಾಪನೆಯಾಗುವ ಮೂಲಕ ಜನತೆಗೆ ಶಾಂತಿ, ನೆಮ್ಮದಿ ಕಲ್ಪಿಸುವ ತಾಣಗಳಾಗುವ ಜೊತೆಯಲ್ಲಿ ಉತ್ತಮ ಸಂಸ್ಕಾರ ರೂಢಿಸುವ ತಾಣವಾಗಿ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಕಲಿಯುಗದಲ್ಲಿ ಗುರುರಾಯರ ಮಹಿಮೆ, ಪವಾಡ ವರ್ಣಿಸಲು ಅಸಾಧ್ಯ, ಗುರುರಾಯರ ಕೃಪೆಯಿಂದ ಈ ಭಾಗದಲ್ಲಿ ಉತ್ತಮ ಮಳೆ, ಬೆಳೆಯಾಗಿ ಜನತೆ ನೆಮ್ಮದಿ ಬದುಕು ಸಾಗಿಸಲಿ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಧ್ಯಾನ ಕೇಂದ್ರದ ಉದ್ಘಾಟನೆ ವೇಳೆಯಲ್ಲಿ ಉತ್ತಮ ಮಳೆ ಬರುತ್ತಿರುವುದು ಶುಭ ಸಂಕೇತವಾಗಿದೆ, ಧಾರ್ಮಿಕ ಕಾರ್ಯಗಳಿಂದ ಜನತೆಯಲ್ಲಿ ಧಾರ್ಮಿಕ ಸಾಮರಸ್ಯ ವೃದ್ಧಿಯಾಗುವ ಜೊತೆಯಲ್ಲಿ ಸಮಾಜದಲ್ಲಿ ನೆಮ್ಮದಿಯುತ ವಾತಾವರಣ ನಿರ್ಮಾಣಕ್ಕೂ ಕಾರಣವಾಗುತ್ತದೆ, ಧಾರ್ಮಿಕ ಕೇಂದ್ರಗಳು ಉದ್ಘಾಟನೆಯಾಗುವುದು ಎಷ್ಟು ಮುಖ್ಯವೋ ಅಲ್ಲಿ ನಿರಂತರ ಪೂಜಾ ಕೈಂಕರ್ಯ ನಡೆಯುವ ಜೊತೆಯಲ್ಲಿ ಜನತೆಗೆ ಹತ್ತಿರ ಆಗುವಂತಾಗಬೇಕು ಎಂದರು.
ಹುಲಿಯೂರು ದುರ್ಗ ಸಿದ್ದಗಂಗ ಮಠದ ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ಕಿತ್ತನಾಗಮಂಗಲ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ರಾಮೇನಹಳ್ಳಿ ಸಿದ್ದಲಿಂಗೇಶ್ವರ ಮಠದ ಶಿವ ಪಂಚಾಯಕ್ಷರಿ ಸ್ವಾಮೀಜಿ, ಪಡುವಗೆರೆಯ ಡಾ.ಪಿ.ಆರ್.ನಾರಾಯಣಾಚಾರ್ ಸ್ವಾಮೀಜಿ, ಖ್ಯಾತ ಹೃದ್ರೋಗ ತಜ್ಞ ಡಾ.ನಟರಾಜ್ ಶೆಟ್ಟಿ, ಟ್ರಸ್ಟ್ನ ಅಧ್ಯಕ್ಷ ಸತ್ಯಮೂರ್ತಿ, ಕಾರ್ಯದರ್ಶಿ ಅಶ್ವಥ್, ಪ್ರಮುಖರಾದ ಹೆಚ್.ಎನ್.ನಟರಾಜ್, ವಿವೇಕಾನಂದ, ವೆಂಕಟೇಶ್ ಇತರರು ಇದ್ದರು.
Comments are closed.