ಆಡಳಿತಾಧಿಕಾರಿಗಳಿಗೆ ಆಗುತ್ತಿರುವ ಒತ್ತಡ ತಪ್ಪಿಸಿ

34

Get real time updates directly on you device, subscribe now.


ತುಮಕೂರು: ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡಬೇಕು, ಅಗತ್ಯ ಮೂಲಭೂತ ಸೌಕರ್ಯ, ತರಬೇತಿ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ, ತುಮಕೂರು ಜಿಲ್ಲಾ ಶಾಖೆಯಿಂದ ಕಂದಾಯ ಸಚಿವರು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಮತ್ತು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ದೇವರಾಜು ನೇತೃತ್ವದಲ್ಲಿ 400ಕ್ಕೂ ಹೆಚ್ಚು ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ನಮ್ಮ ಮನವಿಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ದೇವರಾಜು, ಸರಕಾರ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ರೈತರೊಂದಿಗೆ ನೇರ ಸಂಪರ್ಕದಲ್ಲಿ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ಮೊಬೈಲ್ ಅಫ್ ಮೂಲಕ ಲ್ಯಾಂಡ್ ಬಿಟ್ ಕೆಲಸ ಮಾಡಲು ಗುರಿ ನಿಗದಿ ಪಡಿಸಿದ್ದಾರೆ, ಅಲ್ಲದೆ ರಜಾ ದಿನಗಳಲ್ಲಿಯೂ ಕಾರ್ಯ ನಿರ್ವಹಿಸುವಂತೆ ಒತ್ತಡ ಹೇರಲಾಗುತ್ತಿದೆ, ಇದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು, ಇದೇ ರೀತಿ ಕೆಲಸದ ಒತ್ತಡದಿಂದ ಕಲ್ಬುರ್ಗಿಯಲ್ಲಿ ಓರ್ವ ಗ್ರಾಮ ಆಡಳಿತ ಅಧಿಕಾರಿ ಹೃದಯಾಘಾತಕ್ಕೆ ಒಳಗಾಗಿದ್ದು, ಹಲವಾರು ರೋಗಗಳಿಗೆ ತುತ್ತಾಗುತಿದ್ದಾರೆ, ಹಾಗಾಗಿ ಲ್ಯಾಡ್ ಬೀಟ್ ಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಸರಕಾರಿ ಒತ್ತುವರಿ ತೆರವು ನಿಟ್ಟಿನಲ್ಲಿ ಮೊಬೈಲ್ ಆಫ್ ಮೂಲಕ ಲ್ಯಾಡ್ ಬೀಟ್ ನಡೆಸಿ ಜಮೀನಿನ ಬಾಂದುಗಳನ್ನು ಗುರುತಿಸುವ ವೇಳೆ ಸಣ್ಣಪುಟ್ಟ ವ್ಯತ್ಯಾಸವಾದರೂ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ, ಜಮೀನಿನ ಹದ್ದುಬಸ್ತ್ ಗುರುತಿಸುವ ಸರ್ವೆ ಇಲಾಖೆಯ ಕೆಲಸ, ಹಾಗಾಗಿ ಬಾಂದು ಗುರುತಿಸುವ ಕೆಲಸವನ್ನು ಸರ್ವೆ ಇಲಾಖೆಗೆ ವಹಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದು ದೇವರಾಜು ತಿಳಿಸಿದರು.

ಬಗರ್ ಹುಕ್ಕುಂ ಸಾಗುವಳಿಗೆ ಸಂಬಂಧಿಸಿದಂತೆ ಆಪ್ ಬಳಸಿ ಜಮೀನು ಮಂಜೂರಾಗಿರುವ 1-5 ಕಡತಗಳನ್ನು ಆನ್ ಲೈನ್ ನಲ್ಲಿ ಮಾಡುವಂತೆ ಸರಕಾರ ಸೂಚಿಸಿದೆ, ಆದರೆ ಅಗತ್ಯ ತರಬೇತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಿಲ್ಲ, ಹಾಗಾಗಿ ಮೊದಲು ತರಬೇತಿ ನೀಡಿ ನಂತರ ಕೆಲಸ ವಹಿಸಲಿ ಎಂಬುದು ನಮ್ಮ ಕೋರಿಕೆಯಾಗಿದೆ, ಅಲ್ಲದೆ ಆಧಾರ್ ಸೀಡಿಂಗ್ ಕಾರ್ಯವನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ವಹಿಸಲಾಗಿದೆ, ಒಂದೇ ಬಾರಿ ಹಲವಾರು ಕಾರ್ಯ ನಿರ್ವಹಿಸುವಂತೆ ಮಾಡಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ, ಕೆಲ ಜಮೀನುಗಳ ಮಾಲೀಕರು ಗ್ರಾಮದಲ್ಲಿ ವಾಸವಿಲ್ಲದ ಕಾರಣ ನಿಗದಿತ ಸಮಯದಲ್ಲಿ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ, ಇದರ ಜೊತೆಗೆ ಚುನಾವಣೆ ಕೆಲಸ, ಆದಾಯ ತೆರಿಗೆ ಇಲಾಖೆ, ಬ್ಯಾಂಕ್ ಕೆಲಸಗಳನ್ನು ಸಹ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯ ಒತ್ತಡ ಹೆಚ್ಚಾಗಿದೆ, ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಸರಕಾರ ಹೊಸ ತಂತ್ರಾಂಶವೊಂದನ್ನು ಸಿದ್ಧಪಡಿಸಿದರೆ ಹೆಚ್ಚು ಸೂಕ್ತ ಎಂಬುದು ನಮ್ಮಗಳ ಅಭಿಪ್ರಾಯವಾಗಿದೆ ಎಂದು ಮನವಿಯಲ್ಲಿ ಕೋರಲಾಗಿದೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ನನ್ನ ಹಂತದಲ್ಲಿ ಆಗುವ ಎಲ್ಲಾ ರೀತಿಯ ಸೌಕರ್ಯ ಒದಗಿಸಲು ಸಿದ್ಧರಿದ್ದೇವೆ, ಉಳಿದ ಸಮಸ್ಯೆಗಳ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ರವಿಕುಮಾರ್, ಜಿಲ್ಲಾಧ್ಯಕ್ಷ ದೇವರಾಜು, ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ, ಖಜಾಂಚಿ ಮೋಹನ್ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!