ಕುಣಿಗಲ್: ಮುಂಗಾರು ಮಳೆ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ, ರೈತರು ಪೂರ್ವ ಮುಂಗಾರಿನ ಸಮಯದಲ್ಲಿ ಕೈಗೊಳ್ಳಬೇಕಾದ ಕೃಷಿ ಕಾರ್ಯ ಚಟುವಟಿಕೆಯ ಬಗ್ಗೆ ಸೂಕ್ತ ಅರಿವು ಹೊಂದುವ ಮೂಲಕ ಕೃಷಿ ಲಾಭದಾಯಕವನ್ನಾಗಿಸಿ ಎಂದು ಕೃಷಿ ವಿಶ್ವ ವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಹೆಚ್.ಎಸ್.ಶಿವರಾಮು ಹೇಳಿದರು.
ತಾಲೂಕಿನ ರಂಗಸ್ವಾಮಿ ಗುಡ್ಡ ಕಾವಲ್ ಪ್ರದೇಶದಲ್ಲಿರುವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಕೋನೆಹಳ್ಳಿ ತಿಪಟೂರು, ಕೃಷಿ ಸಂಬಂಧಿತ ಇಲಾಖೆಗಳು, ಕುಣಿಗಲ್ ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಮುಂಗಾರು ತಾಂತ್ರಿಕ ಆಂದೋಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಪೂರ್ವ ಮುಂಗಾರಿನ ಸಮಯದಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆ ಕುರಿತು, ಸುಧಾರಿತ ತಳಿಗಳ ಲಭ್ಯತೆಯ ಮಾಹಿತಿಗಾಗಿ ಕೃಷಿ ವಿಶ್ವ ವಿದ್ಯಾಲಯಕ್ಕೆ ಸೇರಿದ ಹತ್ತು ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ವಿ.ಗೋವಿಂದ ಗೌಡ ಮಾತನಾಡಿ, ಏರುತ್ತಿರುವ ತಾಪಾಮಾನ ಹಾಗೂ ಬದಲಾಗುತ್ತಿರುವ ವಾತಾವರಣ ಅನುಗುಣಕ್ಕೆ ಸರಿಯಾಗಿ ಹವಮಾನ ಚತುರ ಕೃಷಿ ಪದ್ಧತಿ ಅನುಸರಿಸುವುದರಿಂದ ಕೃಷಿಯಲ್ಲಿ ಉತ್ತಮ ಆದಾಯ ಪಡೆಯಬಹುದು ಎಂದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಎನ್.ರಮೇಶ್ ಮಾತನಾಡಿ, ಪ್ರಸ್ತುತ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ನೀರೀಕ್ಷಿಸುತ್ತಿದ್ದು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅವಶ್ಯಕ ಕೃಷಿ ಪರಿಕರಗಳು ದೊರೆಯುತ್ತಿದ್ದು ಈ ಸೇವೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು, ಪ್ರಸಕ್ತ ಸಾಲಿನ ಬೆಳೆವಿಮೆ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ರೈತರು ಮುಂದಾಗಬೇಕೆಂದು ಮನವಿ ಮಾಡಿದರು.
ನಬಾರ್ಡಿನ ಜಿಲ್ಲಾಅಭಿವೃದ್ಧಿ ಅಧಿಕಾರಿ ಎನ್.ಕೀರ್ತಿಪ್ರಭ, ರಾಷ್ಟ್ರೀಯ ಬೀಜ ಪ್ರಾಯೋಜನೆಯ ಸಹಾಯಕ ಬೀಜೋತ್ಪಾದನಾ ಅಧಿಕಾರಿ ಡಾ.ಬಸವರಾಜ್, ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಿಕ ಡಾ.ಶ್ರೀನಿವಾಸ, ಕೆವಿಕೆಯ ವಿಜ್ಞಾನಿ ಡಾ.ಯೋಗೀಶ್, ಡಾ.ದರ್ಶನ್, ಡಾ.ಕೀರ್ತಿ ಶಂಕರ್, ಸಂಶೋಧನ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದು ತಾಲೂಕಿನ ವಿವಿಧೆಡೆಗಳಿಂದ 200ಕ್ಕೂ ಹೆಚ್ಚು ರೈತರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು, ಮಾದರಿ ರೈತರಿಗೆ ಅಭಿನಂದಿಸಿ, ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಪ್ರಮಾಣ ವಚನ ಸ್ವೀಕರಿಸಲಾಯಿತು.
Comments are closed.