ಅಭಿಯಾನದಲ್ಲಿ 2.23 ಲಕ್ಷ ಜನರ ಆರೋಗ್ಯ ತಪಾಸಣೆ

51

Get real time updates directly on you device, subscribe now.


ತುಮಕೂರು: ಜಿಲ್ಲಾದ್ಯಂತ ಕಳೆದ 2023ರ ನವೆಂಬರ್ ಮಾಹೆಯಿಂದ ಹಮ್ಮಿಕೊಂಡಿರುವ ಆರೋಗ್ಯ ತುಮಕೂರು ಅಭಿಯಾನ ಕಾರ್ಯಕ್ರಮದಡಿ ಮನೆ- ಮನೆ ಭೇಟಿ ನೀಡಿ ಈವರೆಗೆ 2,23,000 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಜಿ.ಪ್ರಭು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಿಕ್ಷಣ, ಆರೋಗ್ಯ ಪ್ರಗತಿ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಆರೋಗ್ಯ, ಶಿಕ್ಷಣ ಕಾರ್ಯಕ್ರಮ ಸೇರಿದಂತೆ ಹಲವಾರು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟ 2,23,000 ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ, ತಪಾಸಣೆ ವೇಳೆ ಸಂಶಯಾಸ್ಪದವಾಗಿ ಸುಮಾರು 143 ಜನರಲ್ಲಿ ಬಾಯಿ ಕ್ಯಾನ್ಸರ್, 42 ಜನರಲ್ಲಿ ಸ್ತನ ಕ್ಯಾನ್ಸರ್, 64 ಗರ್ಭಕಂಠ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಲಾಗಿದ್ದು, ಪತ್ತೆ ಹಚ್ಚಿರುವ ಸಂಶಯಾಸ್ಪದ ಕ್ಯಾನ್ಸರ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಈಗಾಗಲೇ 3200 ಕಾಮಗಾರಿ ಕೈಗೆತ್ತಿಕೊಂಡಿದ್ದು, ಪ್ರಸಕ್ತ ವರ್ಷ ಈ ಯೋಜನೆಯಡಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಶಾಲೆಗಳನ್ನು ಗುರುತಿಸಿ ಆಟದ ಮೈದಾನ, ಶೌಚಾಲಯ, ಶಾಲಾ ಆವರಣ ಗೋಡೆ ನಿರ್ಮಾಣ ಕಾಮಗಾರಿ ಕೈಗೊಂಡು ವರ್ಷಾಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ಭೇಟಿ ಮಾಡಿ ಪರಿಶೀಲನೆ ಮಾಡಬೇಕು, ಪ್ರತೀ ಶಾಲೆಯ ಶಿಕ್ಷಕರ ಕಾರ್ಯಕ್ಷಮತೆ ಬಗ್ಗೆ ಮೌಲ್ಯ ಮಾಪನ ಮಾಡಿ ತರಬೇತಿ ನೀಡಬೇಕು, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಹಸಿರು ಗ್ರಾಮ ಅಭಿಯಾನದ ಅಂಗವಾಗಿ 3.3ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ, ಜಿಲ್ಲೆಯಲ್ಲಿರುವ ಸಸ್ಯ ಕ್ಷೇತ್ರಗಳಲ್ಲಿ ಸುಮಾರು 47 ಜಾತಿಯ 14*20 ಅಳತೆಯ 108792 ಹಾಗೂ 10*16 ಅಳತೆಯ 259760 ಸಸಿ ಸೇರಿ ಒಟ್ಟು 368552 ಸಸಿ ಬೆಳೆಸಲಾಗಿದೆ, ಈ ಸಸಿಗಳನ್ನು ಹಸಿರು ಗ್ರಾಮ ಅಭಿಯಾದಡಿ ಶಾಲಾ ಆವರಣ, ಸರ್ಕಾರಿ ಜಾಗ, ಗೋಮಾಳ, ರಸ್ತೆ ಬದಿ, ಆಸ್ಪತ್ರೆ ಆವರಣಗಳಲ್ಲಿ ನೆಟ್ಟು ಮೂರು ವರ್ಷ ಕಾಲ ಬೆಳೆಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ, ಉಪ ಕಾರ್ಯದರ್ಶಿ ಆಡಳಿತ, ಉಪ ಕಾರ್ಯದರ್ಶಿ ಅಭಿವೃದ್ಧಿ, ವಿವಿಧ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!