ಹಾಸ್ಟೆಲ್ ಗಳಲ್ಲಿ ಸೌಲಭ್ಯ ಕಲ್ಪಿಸಲು ಕ್ರಮ

ವಿದ್ಯಾರ್ಥಿನಿಯರ ಬೇಡಿಕೆಗೆ ಸಚಿವ ಪರಮೇಶ್ವರ್ ಭರವಸೆ

47

Get real time updates directly on you device, subscribe now.


ತುಮಕೂರು: ಚಳಿಗಾಲದಲ್ಲಿ ಸ್ನಾನಕ್ಕೆ ಬಿಸಿ ನೀರು ಸೌಲಭ್ಯ ಕಲ್ಪಿಸಬೇಕೆಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರಲ್ಲಿ ಬೇಡಿಕೆ ಇಟ್ಟರು.
ನಗರದ ಬಿ.ಹೆಚ್.ರಸ್ತೆಯಲ್ಲಿರುವ ಮೆಟ್ರಿಕ್ ನಂತರ ಬಾಲಕಿಯರ ಪರಿಶಿಷ್ಟ ಜಾತಿ ಹಾಸ್ಟೆಲ್ ಗೆ ಶುಕ್ರವಾರ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಈ ಬೇಡಿಕೆಯಿಟ್ಟರು, ಕಳೆದ ಶುಕ್ರವಾರ ಜೂನ್ 7 ರಂದು ಇದೇ ಹಾಸ್ಟೆಲ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಕೆಲ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಗಾಬರಿಯಾಗಿದ್ದರು, ಈ ನಿಟ್ಟಿನಲ್ಲಿ ಸಚಿವ ಪರಮೇಶ್ವರ ಅವರು ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ ಮಾತುಗಳನ್ನಾಡಿ, ಸರ್ಕಾರದ ಸವಲತ್ತು ತಲುಪುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಸಿ ನೀರಿನ ಸೌಲಭ್ಯ ಒದಗಿಸಬೇಕೆಂದು ಹಾಸ್ಟೆಲ್ ವಿದ್ಯಾರ್ಥಿನಿಯರು ನನ್ನ ಗಮನಕ್ಕೆ ತಂದಿದ್ದು, ವಿದ್ಯಾರ್ಥಿ ನಿಲಯಗಳಿಗೆ ಬಿಸಿ ನೀರಿನ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿ ನಿಲಯಗಳಲ್ಲಿ 2500 ವಿದ್ಯಾರ್ಥಿನಿಯರಿಗೆ ಮಾತ್ರ ಪ್ರವೇಶಾವಕಾಶವಿದ್ದು, ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ, ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯಾ ಬಲವನ್ನು 5000ಕ್ಕೆ ಹೆಚ್ಚಿಸುವಂತೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತಷ್ಟು ಹಾಸ್ಟೆಲ್ ಗಳನ್ನು ತೆರೆಯಬೇಕೆಂದು ಮನವಿ ಬರುತ್ತಿವೆ, ತುಮಕೂರು ಜಿಲ್ಲೆಯು ಶೈಕ್ಷಣಿಕ ಜಿಲ್ಲೆಯೆಂದು ಪ್ರಸಿದ್ಧಿ ಹೊಂದಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಬಯಸಿ ಜಿಲ್ಲೆಗೆ ಬರುತ್ತಿದ್ದಾರೆ, ಈ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರೆದು ವಿದ್ಯಾರ್ಥಿಗಳ ಸಂಖ್ಯಾಬಲ ಹೆಚ್ಚಿಸಿ ಅಗತ್ಯ ಸವಲತ್ತು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟದಲ್ಲಿ ಬಾಳಿಹಣ್ಣು, ಮೊಟ್ಟೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಧುಗಿರಿ ತಾಲೂಕು ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವರದಿಯಾದ ವಾಂತಿ- ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತೀ ದಿನ ಭೇಟಿ ನೀಡಿ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಚಿನ್ನೇನಹಳ್ಳಿಯಲ್ಲಿ ವಾಂತಿ- ಭೇದಿಯಿಂದ 6 ಮಂದಿ ದುರ್ಮರಣವನ್ನಪ್ಪಿದ್ದರೂ ಜಿಲ್ಲಾಡಳಿತದಿಂದ ಕೇವಲ 2 ಮಂದಿ ಮಾತ್ರ ಮೃತಪಟ್ಟಿದ್ದಾರೆಂದು ಮಾಹಿತಿ ನೀಡಲಾಗುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಜಿಲ್ಲಾಸ್ಪತ್ರೆಯಲ್ಲಿ ವಾಂತಿ- ಭೇದಿಯಿಂದ ಇಬ್ಬರು ವಯೋವೃದ್ಧರು ಮಾತ್ರ ಮೃತಪಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ವರು ಯಾವ ಕಾರಣದಿಂದ ಮೃತಪಟ್ಟಿದ್ದಾರೆಂದು ಪುನರ್ಪರಿಶೀಲಿಸಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ವಾಂತಿ- ಭೇದಿಗೆ ಮೂಲ ಕಾರಣವನ್ನು ಪತ್ತೆ ಹಚ್ಚಲು ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಪೂರ್ಣ ವರದಿ ಬಂದಿರುವುದಿಲ್ಲ, ಕೆಲ ಗ್ರಾಮಸ್ಥರು ಓವರ್ ಹೆಡ್ ಟ್ಯಾಂಕ್ ನೀರು ಕುಡಿದಿದ್ದೇವೆಂದು, ಕೆಲ ಗ್ರಾಮಸ್ಥರು ಪವಿತ್ರವೆನ್ನಲಾಗುವ ಬೆಟ್ಟದ ಮೇಲಿಂದ ತಂದ ನೀರಿನಿಂದ ಮಾಡಿದ ತಂಬಿಟ್ಟು ಸೇವಿಸಿದ್ದೇವೆಂದು ಹೇಳುತ್ತಿದ್ದಾರೆ, ನೀರಿನ ಮಾದರಿ ಪೂರ್ಣ ಪರೀಕ್ಷಾ ವರದಿ ಬಂದ ನಂತರವಷ್ಟೇ ಮೂಲ ಕಾರಣ ಅರಿಯಲು ಸಾಧ್ಯವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ನಿರ್ದೇಶಕ ದಿನೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!