ಕುಣಿಗಲ್: ಪಟ್ಟಣದ ಮೂಲಕ ಹಾದು ಹೋಗುವ ಕೆಲ ಸಾರಿಗೆ ಸಂಸ್ಥೆ ಬಸ್ಸುಗಳು ವ್ಯಾಪಕವಾಗಿ ಕಪ್ಪು ಹೊಗೆ ಹೊರ ಸೂಸುತ್ತಿದ್ದು ಸಂಬಂಧಪಟ್ಟ ಇಲಾಖಾಧಿಕಾರಿಗಳು ವಾಹನಗಳ ಸುಸ್ಥಿತಿಗೆ ಕ್ರಮ ಕೈಗೊಂಡು, ಹೊಗೆ ನಿಯಂತ್ರಿಸಿ ಪರಿಸರ ಸಂರಕ್ಷಣೆಗೆ, ನಾಗರಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಮೂಲಕ ಉಡುಪಿ, ಮಂಗಳೂರು, ಹಾಸನ, ಮೈಸೂರು, ಮಂಡ್ಯ ಜಿಲ್ಲೆಯ ವಿವಿಧ ಘಟಕಗಳ ತುರುವೇಕೆರೆ ಸೇರಿದಂತೆ ತುಮಕೂರು ಜಿಲ್ಲೆಯ ವಿವಿಧ ಘಟಕಗಳ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚಾರ ಮಾಡುತ್ತಿದ್ದು ದಿನಕ್ಕೆ ನೂರಾರು ಬಸ್ಸುಗಳು ಸಂಚರಿಸುತ್ತಿವೆ, ಈ ಪೈಕಿ ಕೆಲ ಬಸ್ಸುಗಳು ಅತ್ಯಧಿಕ ಹೊಗೆ ಸೂಸುತ್ತಿದ್ದು ಇದು ಪಟ್ಟಣದ ನಾಗರಿಕರ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ, ಕೊವಿಡ್ ನಂತರ ಶ್ವಾಸಕೋಶದ ಖಾಯಿಲೆಯಿಂದ ಬಳಲುವವರ ಸಂಖ್ಯೆಯು ಹೆಚ್ಚಾಗಿದೆ ಎಂದು ವೈದ್ಯಕೀಯ ಅಧ್ಯಯನ ವರದಿ ಹೇಳುವ ಜೊತೆಯಲ್ಲಿ ಬಹಳಷ್ಟು ನಾಗರಿಕರು, ಮಕ್ಕಳು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಹೊಗೆ ಸೂಸುವ ಬಸ್ಸುಗಳು ಸಂಚರಿಸಿದಾಗ ಪೂರ್ಣವಾಗಿ ದಹನವಾಗದ ಡೀಸೆಲ್ ನ ಕಾರ್ಬನ್ ಅನಿಲ ಇತರೆ ಅಪಾಯಕಾರಿ ರಸಾಯನ ಮಿಶ್ರಿತ ಹೊಗೆ ಶ್ವಾಸ ಕೋಸದ ಸಮಸ್ಯೆಯಿಂದ ಬಳಲುವವರ ಪಾಲಿಗೆ ಬಹಳಷ್ಟು ಅನಾಹುತ ಸೃಷ್ಟಿಸುತ್ತಿದೆ, ಈ ನಿಟ್ಟಿನಲ್ಲಿ ಕುಣಿಗಲ್ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಹೇಳಿದರೆ ಅವರು ಸದರಿ ಬಸ್ಸಿನ ಘಟಕದವರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿ ಸುಮ್ಮನಾಗುತ್ತಾರೆ ಎಂದು ನಾಗರಿಕ ಪುಟ್ಟರಾಮು ಆರೋಪಿಸುತ್ತಾರೆ.
ಕೇಂದ್ರೀಯ ಮೋಟಾರು ವಾಹನ ಅಧಿನಿಯಮ, ಕರ್ನಾಟಕ ಮೋಟಾರು ವಾಹನ ಅಧಿನಿಯಮದ ವಿವಿಧ ನಿಯಮಾವಳಿಗಳಡಿಯಲ್ಲಿ ಕೆಲ ವಾಹನ ಹೊರತುಪಡಿಸಿ ಇತರೆ ವಾಹನ ಹೊರ ಸೂಸುವ ಮಾಲಿನ್ಯ ಪ್ರಮಾಣ ನಿಯಂತ್ರಣದಲ್ಲಿದೆ ಎಂಬ (ಪಿಯುಸಿ) ಪ್ರಮಾಣ ಪತ್ರ ಹೊಂದುವುದು ಅಗತ್ಯವಾಗಿದೆ, ಆದರೆ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಈ ನಿಯಮ ಅನ್ವಯಿಸುತ್ತದೆಯೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ರಮೇಶ್ ಪ್ರಶ್ನಿಸುತ್ತಾರೆ.
ವಂದೆ ಮಾತರಂ ಲ್ಯಾಬ್ ತಜ್ಞ ಶ್ರೀನಿವಾಸ್ ಮಾತನಾಡಿ, ಡೀಸೆಲ್ ಚಾಲಿತ ವಾಹನಗಳು ಹೊರ ಸೂಸುವ ಹೊಗೆಯಲ್ಲಿ ಕಾರ್ಬನ್ ಪ್ರಮಾಣ ಹೆಚ್ಚಿದ್ದು ಇದರ ಜೊತೆಯಲ್ಲಿ ಇತರೆ ರಸಾಯನಿಕ ಯುಕ್ತ ಗ್ಯಾಸ್ ಗಳಿರುವ ಕಾರಣ ಶ್ವಾಸಕೋಶದ ಸಮಸ್ಯೆ ಇರುವವರು ಈ ಹೊಗೆ ಸೇವಿಸದಲ್ಲಿ ಸಾಕಷ್ಟು ಅನಾರೋಗ್ಯ ಸಮಸ್ಯೆ ಕಾಡುತ್ತವೆ, ಇದರಿಂದಾಗಿ ಅವರು ಗುಣಮಟ್ಟದ ಮಾಸ್ಕ್ ಧರಿಸುವ ಮೂಲಕ ಒಂದು ಹಂತಕ್ಕೆ ಮಾಲಿನ್ಯದಿಂದ ಪಾರಾಗಬಹುದು, ಆದರೆ ವಾಹನ ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಮುಂದಾಗಬೇಕಿದೆ ಎನ್ನುತ್ತಾರೆ.
ಸುರಕ್ಷಿತ ಸಂಚಾರಕ್ಕೆ ಹೆಸರುವಾಸಿಯಾದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳ ಪೈಕಿ ಕೆಲ ಬಸ್ಸುಗಳು ಹೊರ ಸೂಸುವ ಹೊಗೆಯ ಪರಿಣಾಮದಿಂದಾಗಿ ನಾಗರಿಕರು ಪರದಾಡುವಂತಾಗಿದ್ದು ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಸ್ಸುಗಳು ಹೊರ ಸೂಸುವ ಮಾಲಿನ್ಯ ಪರಿಶೀಲಿಸಿ ನಿಯಮಾನುಸಾರ ಇದ್ದಲ್ಲಿ ಮಾತ್ರ ಸಂಚಾರಕ್ಕೆ ನಿಯೋಜಿಸಿದಲ್ಲಿ ಪರಿಸರ ಸಂರಕ್ಷಣೆಯೂ ಆಗಿ ನಾಗರಿಕರ ಆರೋಗ್ಯ ಸಂರಕ್ಷಣೆ ಆಗಲಿದ್ದು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಯಾವ ಕ್ರಮ ಕೈಗೊಳ್ಳಾತ್ತೋರೋ ಎಂದು ಕಾದು ನೋಡಬೇಕಿದೆ.
Comments are closed.