ಪಾವಗಡ: ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜನಸ್ಪಂದನ ಕಾರ್ಯಕ್ರಮವು ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು, ಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಜನಸ್ಪಂದನ ಕಾರ್ಯಕ್ರಮ ಹೆಸರಿಗಷ್ಟೆ ನಡೆಯಬಾರದು, ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿ ಪರಿಹರಿಸಿದಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಸಾರ್ಥಕವಾಗುತ್ತದೆ, ಸಾರ್ವಜನಿಕರ ಸಮಸ್ಯೆ ನಿಗದಿತ ಅವಧಿಯೊಳಗೆ ಪರಿಹರಿಸುವುದೇ ಜನಸ್ಪಂದನಾ ಕಾರ್ಯಕ್ರಮದ ಉದ್ದೇಶ, ಉದ್ದೇಶ ಕಾರ್ಯಗತ ವಾಗದಿದ್ದಲ್ಲಿ ಇಂತಹ 100 ಕಾರ್ಯಕ್ರಮ ಏರ್ಪಡಿಸಿದರೂ ಯಾವುದೇ ಪ್ರಯೋಜನವಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪಾವಗಡ ತಾಲ್ಲೂಕಿನ ಎಲ್ಲಾ ಇಲಾಖೆಗಳ ಸ್ಥಿತಿಗತಿಗಳ ಬಗ್ಗೆ ಹಾಗೂ ವಿವಿಧ ಗ್ರಾಮಗಳ ರಸ್ತೆ, ವಸತಿ ನಿಲಯ, ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ತಾಲೂಕು ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿ ನ್ಯೂನ್ಯತೆ ಪರಿಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಜಾನಕೀರಾಂ, ತಹಶೀಲ್ದಾರ್ ವರದರಾಜು, ಪುರಸಭೆ ಸದಸ್ಯ ಜಿ.ನಾಗರಾಜು ಇತರರು ಇದ್ದರು.
Comments are closed.