ಕುಣಿಗಲ್: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಸಮೀಪ ಸುಪ್ರೀಂ ಕೋರ್ಟ್ನ ತೀರ್ಪಿನಂತೆ ತಂಬಾಕು ನಿಷೇಧ ವಲಯವನ್ನಾಗಿ ಕ್ರಮ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಅದಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಭಜರಂಗದಳದ ಪ್ರಮುಖ ಗಿರೀಶ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ವಿವರ ನೀಡಿದ ಅವರು ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಯಾವುದೇ ಶಾಲಾ, ಕಾಲೇಜುಗಳ ಸಮೀಪದಿಂದ ನೂರು ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಗುಟ್ಕಾ, ಇತರೆ ಮಾರಾಟ, ಬಳಕೆ ನಿಷೇಧಿಸಲಾಗಿದೆ. ಅಲ್ಲದೆ ತಂಬಾಕು ಮುಕ್ತ ವಲಯವನ್ನಾಗಿ ಘೋಷಣೆ ಮಾಡಿದೆ, ಈ ನಿಟ್ಟಿನಲ್ಲಿ ಬಹುತೇಕ ಶಾಲಾಡಳಿತ ಮಂಡಳಿಯವರು ಕೇವಲ ನಾಮಫಲಕ ಹಾಕಿ ಕೈ ತೊಳೆದುಕೊಂಡಿದ್ದು ಕೋಟ್ಪಾ ಕಾಯಿದೆ ಪ್ರಕಾರ ನಿಯಮಾವಳಿ ಜಾರಿಗೊಳಿಸಬೇಕಾದ ಶಿಕ್ಷಣ ಇಲಾಖಾಧಿಕಾರಿಗಳು, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಇತರೆ ನಿಯೋಜಿತ ಅಧಿಕಾರಿಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ನಿಯಮ ಜಾರಿಯಲ್ಲಿದ್ದರೂ ಅದೂ ಕೇವಲ ನಾಮಫಲಕಕ್ಕೆ ಮಾತ್ರ ಎಂಬಂತಾಗಿದೆ.
ಶಾಲಾ ಕಾಲೇಜಿಗೆ ತೆರಳುವ ಅಪ್ರಾಪ್ತ ವಯೋಮಾನದ ಮಕ್ಕಳ ಮೇಲೆ ಶಾಲಾ ಕಾಲೇಜು ಸಮೀಪವೆ ನಿಷೇಧಿತ ತಂಬಾಕು ಪದಾರ್ಥಗಳು ಮಾರಾಟ ಆಗುವುದರಿಂದ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರುವ ಜೊತೆಯಲ್ಲಿ ಹಲವು ರೀತಿಯ ಸಮಸ್ಯೆಗೆ ಕಾರಣವಾಗಲಿದೆ, ತಾಲೂಕಿನಲ್ಲಿರುವ ಕೋಟ್ಪಾ ಜಾರಿ ವಿಭಾಗವು ನೆಪ ಮಾತ್ರಕ್ಕೆ ದಾಳಿ ಮಾಡಿ ಲೆಕ್ಕ ತೋರಿಸಲು ಸೀಮಿತವಾಗಿದ್ದು ಶಾಲಾ,ಕಾಲೇಜಿನ ಸಮೀಪ ದೇಶದಮುಂದಿನ ಭವಿಷ್ಯವಾದ ಮುಂದಿನ ಪ್ರಜೆಗಳಾದ ಇಂದಿನ ಎಳೆಮಕ್ಕಳ ಮೇಲೆ ಮನಸಿನ ಮೇಲಾಗುವ ಪರಿಣಾಮದ ಬಗ್ಗೆ ಅರಿವೆ ಇಲ್ಲದಂತಾಗಿರುವುದು ಖೇದಕರ, ಸರ್ವೋಚ್ಛ ನ್ಯಾಯಾಲಯವು ದೇಶದ ಭವಿಷ್ಯದ ಪ್ರಜೆಗಳ ದೈಹಿಕ, ಮಾನಸಿಕ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಜಾರಿಗೊಳಿಸಿದ ಆದೇಶ ಕೇವಲ ನಾಮಫಲಕಕ್ಕೆ ಸೀಮಿತವಾಗದೆ, ಪರಿಣಾಮಕಾರಿಯಾಗಿ ಜಾರಿಯಾಗುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯವರು ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Comments are closed.