ಮಧುಗಿರಿ: ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ಕಾಲರಾ ಇರುವುದು ಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.
ಗ್ರಾಮದ ಕೃಷ್ಣಪ್ಪ(32) ಎಂಬುವವರು ವಾಂತಿ- ಭೇದಿಯಿಂದ ಅಸ್ವಸ್ಥ ಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಸ್ವಯಂ ಪ್ರೇರಿತವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ದಾಬಸ್ ಪೇಟೆಯಲ್ಲಿ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಆಸ್ಪತ್ರೆಯಲ್ಲಿದ್ದಾಗ ನಡೆಸಿದ್ದ ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಕಾಲರಾ ದೃಢವಾಗಿದ್ದು ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಬೇಕಿದೆ,
ಕಾಲರಾ ಸಾಮಾನ್ಯವಾಗಿ ಕಲುಷಿತ ನೀರಿನಿಂದ ಹರಡುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದೆ, ತೀವ್ರ ಅತಿಸಾರ ಮತ್ತು ನಿರ್ಜಲೀಕರಣ ಉಂಟು ಮಾಡುತ್ತದೆ, ಕಾಲರಾ ಮನುಷ್ಯನಲ್ಲಿ ಉಂಟಾಗುವ ಒಂದು ಗಂಭೀರ ಸ್ವರೂಪದ ಬ್ಯಾಕ್ಟೀರಿಯಲ್ ಕಾಯಿಲೆಯಾಗಿದ್ದು, ಇದರಿಂದ ವಿಪರೀತ ಭೇದಿ ಮತ್ತು ದೇಹದಲ್ಲಿ ನೀರಿನ ಅಂಶವೇ ಇಲ್ಲದಂತಾಗಿ ನಿರ್ಜಲೀಕರಣದ ಸಮಸ್ಯೆ ಎದುರಾಗುತ್ತದೆ, ಈ ಕಾಯಿಲೆ ಸಾಮಾನ್ಯವಾಗಿ ಕೊಳಕು ನೀರಿನಿಂದ ಉಂಟಾಗುತ್ತದೆ.
ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸುಮಾರು 200 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು, 6 ಜನ ಮೃತ ಪಟ್ಟಿದ್ದಾರೆ,
ಈಗ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಕಾಲರಾ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದ್ದು, ಗ್ರಾಮದ ವ್ಯಕ್ತಿಯೊಬ್ಬರಲ್ಲಿ ಕಾಲರಾ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
11ಜನ ಅಸ್ವಸ್ಥ: ಭಾನುವಾರ ಮತ್ತೆ 11 ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದ್ದು, 9 ಜನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಬ್ಬರು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
Comments are closed.