ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ಕಲ್ಪಿಸಲು ಯತ್ನಿಸುವೆ

ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕೆ ಹೇಳಿಕೆ

30

Get real time updates directly on you device, subscribe now.


ಶಿರಾ: ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡಿ ಗ್ರಾಮೀಣ ಪ್ರದೇಶದ ಯುವಕ, ಯುವತಿಯರಿಗೆ ಉದ್ಯೋಗ ನೀಡುವ ಕಾರ್ಯ ಮಾಡುತ್ತೇನೆ, ನಂಜಾವಧೂತ ಶ್ರೀಗಳ ಸಲಹೆಯಂತೆ ಕುಂಚಿಟಿಗ ಸಮುದಾಯಕ್ಕೆ ಓಬಿಸಿ ಮೀಸಲಾತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಪಟ್ಟನಾಯಕನ ಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಕ್ಕೆ ಸೋಮವಾರ ಭೇಟಿ ನೀಡಿ ಶ್ರೀಓಂಕಾರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಶ್ರೀನಂಜಾವಧೂತ ಸ್ವಾಮೀಜಿಗಳ ಆರ್ಶೀವಾದ ಪಡೆದು ಮಾತನಾಡಿದರು. ಕೇಂದ್ರದ ಎನ್ ಡಿ ಎ ಸರ್ಕಾರದಲ್ಲಿ ನಾನು ಕೃಷಿ ಸಚಿವನವಾಗದಿದ್ದರೂ ರಾಜ್ಯದ ರೈತರ ಏಳಿಗೆಗಾಗಿ ಶ್ರಮಿಸುತ್ತೇನೆ, ಈಗಾಗಲೇ ನಮ್ಮ ತಂದೆಯವರು ಕಾಡುಗೊಲ್ಲರಿಗೆ ಎಸ್ ಟಿ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದು, ನಾನು ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕಾಡುಗೊಲ್ಲರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ ಮತ್ತು ಕಾಡುಗೊಲ್ಲ ಮುಖಂಡರು ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಕಲ್ಪಿಸಿ ಕೊಡುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿ ಅವರಿಗೆ ಮಾನವಿ ಪತ್ರ ನೀಡಿದರು.
ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀನಂಜಾವಧೂತ ಸ್ವಾಮೀಜಿ ಹೆಚ್.ಡಿ.ಕುಮಾರ ಸ್ವಾಮಿಗೆ ಆರ್ಶೀವಚನ ನೀಡಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಮೈಸೂರು ಮಿಲ್ಸ್, ಭದ್ರಾವತಿ ಉಕ್ಕಿನ ಕಾರ್ಖಾನೆ ಪುನಃಶ್ಚೇತನ ಗೊಳಿಸುವುದರ ಜೊತೆಗೆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳಲ್ಲಿ ನಮ್ಮ ರಾಜ್ಯದವರಿಗೆ ಉದ್ಯೋಗ ನೀಡುವಂತಹ ಮಹತ್ವ ನಿರ್ಧಾರವನ್ನು ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ತೆಗೆದುಕೊಳ್ಳುವ ಅವಶ್ಯಕತೆ ಇದೆ, ಕುಂಚಿಟಿಗ ಸಮುದಾಯ ಕೇಂದ್ರ ಓಬಿಸಿ ಮೀಸಲು ಪಟ್ಟಿಯಲ್ಲಿ ಸೇರಿಸಬೇಕೆಂಬ ಕಡತ ಕೇಂದ್ರ ಸರ್ಕಾರದ ಮುಂದಿದ್ದು ಒಕ್ಕಲಿಗ ಉಪ ಜಾತಿಯಡಿಯಲ್ಲಿ ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ಕಲ್ಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಅನು ಮಾಡಿಕೊಡಬೇಕು, ಶಿರಾ ಮತ್ತು ತುಮಕೂರು ವಸಂತ ನರಸಾಪುರ ಕೈಗಾರಿಕಾ ವಲಯ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸುವ ಮೂಲಕ ಚಿತ್ರದುರ್ಗ ಕೋಲಾರ, ತುಮಕೂರು ಚಿಕ್ಕಬಳ್ಳಾಪುರ ಬಯಲು ಸೀಮೆಯ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವಂತಹ ಕೆಲಸ ಮಾಡಬೇಕು, ಅಪ್ಪರ ಭದ್ರ ನೀರಾವರಿ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದರ ಜೊತೆಗೆ ಯೋಜನೆಯಲ್ಲಿ ಕೈಬಿಟ್ಟಿರುವ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳನ್ನು ಸೇರ್ಪಡೆಗೊಳಿಸಿ ಅಲ್ಲಿನ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ನೂತನ ಕೇಂದ್ರ ಸಚಿವರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ, ಶಾಸಕ ಸಿ.ಬಿ.ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ಕೆ.ಎ.ತಿಪ್ಪೇಸ್ವಾಮಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್, ಮಾಜಿ ಜಿಪಂ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಮಾಜಿ ಶಾಸಕರಾದ ವೀರಭದ್ರಪ್ಪ, ಸುಧಾಕರ್ ಲಾಲ್, ತಿಮ್ಮರಾಯಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಮಾಜಿ ಸಚಿವ ಶಿವಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯ ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ರಾಮಕೃಷ್ಣ, ಜೆಡಿಎಸ್ ಮಾಧ್ಯಮ ವಕ್ತಾರ ಲಿಂಗದಹಳ್ಳಿ ಚೇತನ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!