ತುಮಕೂರು: ನಗರದ ಕ್ಯಾತ್ಸಂದ್ರದ ಆದಿಶಕ್ತಿ ದೊಡ್ಡಮ್ಮ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು, ಕ್ಯಾತ್ಸಂದ್ರದಿಂದ ಸಿದ್ಧಗಂಗಾ ಮಠಕ್ಕೆ ನಿರ್ಮಿಸಿರುವ ಫ್ಲೈ ಓವರ್ ಕೆಳಗಿನ ರಸ್ತೆ, ಚರಂಡಿ ಕಾಮಗಾರಿ ಪೂರ್ಣವಾಗದೆ ಈ ಅವಸ್ಥೆ ಉಂಟಾಗಿದೆ ಎಂದು ದೇವಸ್ಥಾನ ಸಮಿತಿಯವರು ದೂರಿದ್ದಾರೆ.
ಫ್ಲೈ ಓವರ್ ಕಾಮಗಾರಿ ಮುಗಿದು ಹಲವು ತಿಂಗಳಾಗಿವೆ, ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿಲಾಗಿದೆ, ಆದರೆ ಸೇತುವೆ ಕೆಳಗಿನ ಎರಡೂ ಬದಿಯ ರಸ್ತೆಗಳು, ಚರಂಡಿ ಕಾಮಗಾರಿ ಮುಗಿದಿಲ್ಲ, ಹಲವಾರು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ, ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ದೇವಸ್ಥಾನದೊಳಗೆ ನುಗ್ಗುತ್ತದೆ, ಇದರಿಂದ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಕ್ಕೆ ಅಡಚಣೆಯಾಗಿದೆ, ದೇವರ ದರ್ಶನಕ್ಕೆ ಬರುವ ಭಕ್ತರಿಗೂ ತೊಂದರೆಯಾಗಿದೆ, ಪ್ರತಿ ಮಳೆಯಲ್ಲೂ ದೇವಸ್ಥಾನಕ್ಕೆ ನುಗ್ಗುವ ನೀರು ಹೊರ ಹಾಕಿ, ಸ್ವಚ್ಛಗೊಳಿಸುವುದೇ ನಿತ್ಯದ ಸವಾಲಾಗಿದೆ ಎಂದು ದೇವಸ್ಥಾನ ಸಮಿತಿ ಉಪಾಧ್ಯಕ್ಷ ಯಜಮಾನ್ ಗಂಗಹನುಮಯ್ಯ ಹೇಳಿದರು.
ಸೇತುವೆ ಕೆಳಗಿನ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡದೆ ಬಾಕಿ ಉಳಿಸಿರುವ ಕಾರಣ ಈ ಭಾಗದಲ್ಲಿ ಜನ, ವಾಹನ ಓಡಾಟಕ್ಕೂ ಸಮಸ್ಯೆಯಾಗಿದೆ, ಇಲ್ಲಿ ನಡೆಯುವ ಸಂತೆಗೆ ಖರೀದಿಗೆ ಬರುವವರಿಗೂ ಅನಾನುಕೂಲವಾಗಿದೆ, ಕಾಮಗಾರಿ ಕೈಗೆತ್ತಿಕೊಂಡ ಮೇಲೆ ಅದನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು, ಇಲ್ಲವಾದರೆ ಈ ರೀತಿ ಸಾರ್ವಜನಿಕರಿಗೆ ಅನಾನುಕೂಲ ಆಗುತ್ತದೆ ಎಂದು ಹೇಳಿದರು.
ಈ ವಿಚಾರವಾಗಿ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ, ಈಗಲಾದರೂ ಅಧಿಕಾರಿಗಳು ಸೇತುವೆ ಕೆಳಗಿನ ರಸ್ತೆ, ಚರಂಡಿ ಕಾಮಗಾರಿ ಪೂರ್ಣಗೊಳಿಸಿ ಮಳೆ ನೀರು ಹಾಗೂ ಜನರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಖಂಡರಾದ ಪಟೇಲ್ ಅರುಣ್, ಚಿಕ್ಕರಂಗಯ್ಯ, ಜಯಸಿಂಹ, ನಾರಾಯಣಪ್ಪ, ಕೆ.ಟಿ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.
Comments are closed.