ಕುಣಿಗಲ್: ಪಟ್ಟಣದ ಚಿಕ್ಕಕೆರೆ ಏರಿಗೆ ನಿರ್ಮಿಸಲಾಗಿರುವ ರೈಲ್ವೆ ಸೇತುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ವಿವಿಧ ಇಲಾಖಾಧಿಕಾರಿ ಗಳು ಪತ್ರ ಬರೆಯುತ್ತಾ ಕಾಲ ಹರಣ ಮಾಡುತ್ತಿರುವ ಕಾರಣ ಸೇತುವೆ ರಸ್ತೆ ಬಳಕೆದಾರರು ಜೀವ ಕೈಲಿ ಹಿಡಿದು ಸಂಚಾರ ಮಾಡುವಂತಾಗಿದೆ.
ಬೆಂಗಳೂರು- ಮಂಗಳೂರು ರೈಲು ಕಾಮಗಾರಿಗೆ 2012- 13ರಲ್ಲಿ ರಾಜ್ಯಹೆದ್ದಾರಿ33 (ತುಮಕೂರು- ಮೈಸೂರು) ಗೆ ರೈಲ್ವೆ ಇಲಾಖೆ ವತಿಯಿಂದ ಮೇಲು ಸೇತುವೆ ರಸ್ತೆ ನಿರ್ಮಿಸಲಾಯಿತು, ಅದರೆ ಕಾಲ ಕಾಲಕ್ಕೆ ನಿರ್ವಹಣೆ ಕೊರತೆಯಿಂದಾಗಿ ಸೇತುವೆ ಮೇಲಿನ ರಸ್ತೆ, ಸಿಮೆಂಟ್ ಬ್ಲಾಕ್ ಸೇರಿಸಿದ್ದ ಕಬ್ಬಿಣದ ಆಂಗಲ್ ಕಿತ್ತು ಸೇತುವೆ ರಸ್ತೆಯ ಸೇರ್ಪಡೆ ಮಾಡಿರುವ ಬ್ಲಾಕ್ ಗಳಿಗೆ ಹಾಕಲಾಗಿರುವ ಕಬ್ಬಿಣದ ಸರಳುಗಳು ಹೊರ ಬಂದು ಬಲಿಗಾಗಿ ಕಾದಿವೆ, ರಸ್ತೆ ದುರಸ್ತಿ ಮಾಡಲು ರೈಲ್ವೆ ಇಲಾಖೆ, ಕೆಶಿಪ್,ತಾಲೂಕು ಅಡಳಿತ,ಜಿಲ್ಲಾಡಳಿತ ಸೇರಿದಂತೆ ಪೊಲೀಸರಿಗೆ ಮನವಿ ಸಲ್ಲಿಸಿ ದುರಸ್ತಿಗೆ ನಾಗರೀಕರು ಒತ್ತಾಯಿಸಿದ್ದಾರೆ. ರಸ್ತೆ ದುರಸ್ತಿಗೆ ಪೊಲೀಸರು ಕೆಶಿಪ್ ಇಲಾಖೆಗೆ ಪತ್ರ ಬರೆದರೆ ಕೆಶಿಪ್ ಇಲಾಖೆ, ದುರಸ್ತಿ ರೈಲ್ವೆ ಇಲಾಖೆ ಮಾಡಬೇಕೆಂದು ಹೇಳಿ ಕೈ ತೊಳೆದುಕೊಳ್ಳುತ್ತಿದೆ, ನೈಋತ್ಯ ರೈಲ್ವೆಯವರು ರಸ್ತೆಯನ್ನು ಕೆಶಿಪ್ ಗೆ ವಹಿಸಿದ್ದು ಅವರೆ ನಿರ್ವಹಣೆ ಮಾಡಬೇಕೆಂದು ಪತ್ರಬರೆದು ಜವಾಬ್ದಾರಿಯಿಂದ ಜಾರಿ ಕೊಳ್ಳುತ್ತಿದ್ದಾರೆ, ಪೊಲಿಸ್, ಕೆಶಿಪ್, ರೈಲ್ವೆ ಇಲಾಖೆ ನಡುವೆ ಕಳೆದ ಎರಡು ವರ್ಷಗಳಿಂದಲೂ ದುರಸ್ತಿಗೆ ಬರೀ ಪತ್ರ ವ್ಯವಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ.
ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಕ್ರಮಕ್ಕೆ ಮುಂದಾಗಿಲ್ಲದೇ ಇರವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ, ಸೇತುವೆ ಮೇಲಿನ ರಸ್ತೆಯಲ್ಲಿ ಗುಂಡಿಗಳು ಮುಚ್ಚಿ ದುರಸ್ತಿ ಮಾಡುವಂತೆ ಗುಜ್ಜಾರಿ ಮೊಹಲ್ಲಾ ಭಾಗದ ಜನರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನೆಪ ಮಾತ್ರಕ್ಕೆ ಗುಂಡಿ ಮುಚ್ಚುವ ಕೆಶಿಪ್ ನವರು ಪೂರ್ತಾ ರಸ್ತೆ ದುರಸ್ತಿಗೆ ಕ್ರಮ ವಹಿಸುತ್ತಿಲ್ಲ, ರಸ್ತೆಗೆ ಸುಂಕ ವಸೂಲು ಮಾಡುತ್ತಿದ್ದರೂ ಮೇಲು ಸೇತುವೆ ರಸ್ತೆ ದುರಸ್ತಿಗೆ ತಾಂತ್ರಿಕ ನೆಪ ನೀಡಿ ಸುಮ್ಮನಾಗುತ್ತಿದ್ದು, ವಿವಿಧ ಇಲಾಖಾಧಿಕಾರಿಗಳ ಪತ್ರ ವ್ಯವಹಾರ ಅಪ್ಪ ಅಮ್ಮನ ಜಗಳವಾಗಿದ್ದು ಇವರ ಜಗಳದಲ್ಲಿ ಮಕ್ಕಳಾದ ವಾಹನ ಸವಾರರು ಪರದಾಡುವಂತಾಗಿದೆ, ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಳೆ ನೀರು ಈಗಾಗಲೆ ಸೇತುವೆ ಮೇಲೆ ಗುಂಡಿಗಳಲ್ಲಿ ಇಳಿದು ಸೇತುವೆ ಅಸ್ತಿತ್ವಕ್ಕೆ ಅಪಾಯವಾಗುವ ಸಾಧ್ಯತೆ ಇದ್ದರೆ, ರಸ್ತೆಯ ಬೃಹತ್ ಹೊಂಡಗಳಿಂದ ಸೇತುವೆಗೆ ಮತ್ತಷ್ಟು ಹಾನಿಯಾಗಲಿದೆ, ವಾಹನ ಸವಾರರಿಗು ತೊಂದರೆಯಾಗಲಿದೆ, ಅಪಘಾತವಾದಾಗ ಗಾಯಾಳು, ಮೃತಪಟ್ಟವರ ನೆರವಿಗೆ ಬರುವ ತಾಲೂಕು, ಜಿಲ್ಲಾಡಳಿತ ಪ್ರಾಣ ಹಾನಿ, ಆಸ್ತಿಹಾನಿ ಸಂಭವಿಸುವ ಮುನ್ನ ಸೇತುವೆ ಮೇಲಿನ ರಸ್ತೆ ದುರಸ್ತಿಗೊಳಿಸಿ ಸುರಕ್ಷಿತ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
Comments are closed.