ಮುಸ್ಲಿಂ ಬಾಂಧವರು ರಂಜಾನ್ ಹಬ್ಬದಲ್ಲಿ ಮಾರ್ಗಸೂಚಿ ಪಾಲಿಸಿ: ಜಿಲ್ಲಾಧಿಕಾರಿ

ಕೊರೊನಾ ತಡೆಗೆ ಸಮುದಾಯ ಸಹಭಾಗಿತ್ವ ಅವಶ್ಯ

448

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಎಲ್ಲಾ ಸಮುದಾಯದವರ ಸಹಭಾಗಿತ್ವ ಮತ್ತು ಸಹಕಾರ ಅತ್ಯಾವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರಿನಲ್ಲಿಯೂ ದಿನೇ ದಿನೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ, ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಮಾಸ್ಕ್ ಹಾಕಿಕೊಳ್ಳುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ವಯಸ್ಸಾದವರು ಅನವಶ್ಯಕವಾಗಿ ಹೊರಗಡೆ ಬರಬಾರದು ಎಂದು ತಿಳಿಸಿದರು.
ರಂಜಾನ್ ಸಮಯದಲ್ಲಿ ಉಪವಾಸದ ಆಚರಣೆ ರೂಢಿಯಲ್ಲಿದ್ದು, ಈ ಸಂದರ್ಭದಲ್ಲೂ ಲಸಿಕೆ ಹಾಕಿಸಿಕೊಳ್ಳಲಿಚ್ಛಿಸುವವರಿಗೆ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ತಮ್ಮ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸಬೇಕು. ಕೋವಿಡ್ ಲಕ್ಷಣ ಕಂಡು ಬಂದ ತಕ್ಷಣ ಅಂತಹವರನ್ನು ಪರೀಕ್ಷೆಗೊಳಪಡಿಸಿ ಚಿಕಿತ್ಸೆಗೆ ದಾಖಲಿಸಬೇಕಲ್ಲದೆ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಕಳೆದ 2019ನೇ ವರ್ಷದಲ್ಲಿ ಇದೇ ಸಮಯದಲ್ಲಿ ಕೊರೊನಾ ಹರಡಿತ್ತು, ಆ ಸಂದರ್ಭದಲ್ಲೂ ಮುಸ್ಲಿಂ ಬಾಂಧವರು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿದ್ದು, ಅದರಂತೆಯೇ ಈ ವರ್ಷವೂ ಸಹಕರಿಸಬೇಕು, ರಂಜಾನ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲಾ ಮಸೀದಿಗಳಿಗೂ ಇಲಾಖೆಯಿಂದ ರವಾನಿಸಲಾಗುವುದು, ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಶಫಿ ಅಹಮದ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿ ಆದೇಶ ಪಾಲಿಸುವಲ್ಲಿ ಸಹಕರಿಸಲಾಗುವುದು ಎಂದ ಅವರು, ರಾತ್ರಿ ಸಮಯದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿದ ಬಳಿಕ ಮನೆ ಸೇರಲು ಐದ್ಹತ್ತು ನಿಮಿಷ ವ್ಯತ್ಯಾಸ ಆಗಬಹುದು, ಹಾಗಾಗಿ ಕರ್ಫ್ಯೂ ವೇಳೆಯಲ್ಲಿ ಮನೆ ಸೇರಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ತುಮಕೂರು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಮುಸ್ತಾ ಅಹಮದ್ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವೂ ಕೋವಿಡ್ ಅಲೆಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ 80 ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಒಟ್ಟು 410 ಮಸೀದಿಗಳಿಗೆ ಈಗಾಗಲೇ ಸರ್ಕಾರದ ಮಾರ್ಗಸೂಚಿಗಳನ್ನು ಉರ್ದುಗೆ ಭಾಷಾಂತರ ಮಾಡಿ ಕಳಿಸಿಕೊಡಲಾಗಿದ್ದು, ಪಾಲನೆ ಮಾಡಲಾಗುತ್ತಿದೆ ಎಂದರು.
ಪಾಲಿಕೆ ಸದಸ್ಯ ನಯಾಜ್ ಮಾತನಾಡಿ, ಸುಳ್ಳು ಸುದ್ದಿಯಿಂದಾಗಿ ಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣ ಕಡಿಮೆಯಾಗುತ್ತದೆ, ಹಾಗಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಡಾ.ವಸೀಮ್ ಮಾತನಾಡಿ, ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿಯೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಕೋವಿಡ್ ನಿಯಂತ್ರಣ ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ಡಾ.ಅಸ್ಕರ್ ಖಲೀನ್ ಮಾತನಾಡಿ, ರಂಜಾನ್ ಸಮಯದಲ್ಲಿ ಉಪವಾಸ ಇಲ್ಲದವರು ಲಸಿಕೆ ಪಡೆದುಕೊಳ್ಳಬಹುದು. ಉಳಿದವರಿಗೆ ಹಬ್ಬದ ಬಳಿಕ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖಂಡರ ಸಲಹೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಎಲ್ಲಾ ಮಸೀದಿಗಳಲ್ಲಿಯೂ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು, ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು, ಲಸಿಕೆ ಹಾಕಿಸಲು ಹೆಚ್ಚು ಒತ್ತು ಕೊಡಬೇಕು, 100 ಜನ ಒಂದೆಡೆ ಸೇರಿ ಲಸಿಕೆ ಹಾಕಿಸಿಕೊಳ್ಳಲು ಬಯಸಿದರೆ ಆ ಸ್ಥಳಕ್ಕೆ ಆರೋಗ್ಯ ಸಿಬ್ಬಂದಿ ತೆರಳಿ ಲಸಿಕೆ ಹಾಕುವರು, ಲಸಿಕೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಆರ್ಸಿಹೆಚ್ ಅಧಿಕಾರಿ ಡಾ.ಕೇಶವ್ರಾಜ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಮೋಹನ್ದಾಸ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!