ಕೊರಟಗೆರೆ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದು ವಿದ್ಯುತ್, ಸ್ಟಾಂಪ್ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಜನರಿಂದ ಕೋಟ್ಯಾಂತರ ಹಣ ಲೂಟಿ ಮಾಡುತ್ತಿದೆ, ಇಂದೇ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತಗೊಳಸಿದಿದ್ದರೆ ಮುಂದಿನ ದಿನಗಳಲ್ಲಿ ಎನ್ ಡಿ ಎ ಪಕ್ಷವು ರಾಜ್ಯಾಂದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ತಾ. ಅಧ್ಯಕ್ಷ ದರ್ಶನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಟ್ಟಣದ ಎಸ್ ಎಸ್ ಆರ್ ವೃತ್ತದಲ್ಲಿ ಎನ್ ಡಿಎ ಪಕ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬೃಹತ್ ರಸ್ತೆ ತಡೆ ಪ್ರತಿಭಟನೆ ವೇಳೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾರ್ಗದರ್ಶನದಂತೆ ರಾಜ್ಯಾಂದ್ಯಂತ ಎನ್ ಡಿ ಎ ಪಕ್ಷವು ರಸ್ತೆ ತಡೆದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ, ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ, ಸರ್ಕಾರ ಸ್ವಾರ್ಥಕ್ಕೋಸ್ಕರ ಬಿಟ್ಟಿ ಭಾಗ್ಯಗಳನ್ನು ನೀಡಿ ಜನರು ದಿನನಿತ್ಯ ಬಳಸುವಂತಹ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ಮೋಸ ಮಾಡುತ್ತಿದೆ, ಸರ್ಕಾರದ 2 ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ ಎಂದು ಆರೋಪ ಮಾಡಿದರು.
ಬಿಜೆಪಿ ಮಾಜಿ ಅಧ್ಯಕ್ಷ ಪವನ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಪೂರೈಸಲು ಜನರು ಬಳಸುವಂತಹ ಡೀಸೆಲ್ ಮತ್ತು ಪೆಟ್ರೋಲ್, ಇತರೆ ವಸ್ತುಗಳ ಬೆಲೆ ಎರಿಕೆ ಮಾಡಿದೆ, ಸಾಮಾನ್ಯ ಜನರಿಗೆ ಇದರಿಂದ ಬಹಳಷ್ಟು ಅನಾನುಕೂಲ ವಾಗುತ್ತಿದೆ, ಮನಸ್ಸೋ ಇಚ್ಛೆಯಂತೆ ಸರ್ಕಾರ ನಡೆಯುತ್ತಿದ್ದು, ಈಗಾಗಲೇ ಬೆಲೆ ಏರಿಕೆಯಾಗಿರುವ ಎಲ್ಲಾ ವಸ್ತುಗಳ ಬೆಲೆ ಕಡಿಮೆ ಮಾಡದಿದ್ದರೆ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಮಾತನಾಡಿ, ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಎನ್ಡಿಎ ಪಕ್ಷವು ರಾಜ್ಯಾಂದ್ಯಂತ ಪ್ರತಿಭಟನೆ ನಡೆಸುತ್ತಿದೆ, ಸಾಮಾನ್ಯ ಜನರು ಬಳಕೆ ಮಾಡುವಂತಹ ವಸ್ತುಗಳು ಮತ್ತು ತೈಲದ ಬೆಲೆ ಏರಿಕೆ ಮಾಡಿ ಸರ್ಕಾರ ಬಿಟ್ಟಿ ಭಾಗ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಇದರಿಂದ ಜನರಿಗೆ ಸಾಕಷ್ಟು ಒಡೆತ ಬೀಳುತ್ತಿದೆ, ಕಾಂಗ್ರೆಸ್ ರಾಜ್ಯ ಸರ್ಕಾರ ಹಿಂದೂಗಳ ಮೇಲೆ ಹೆಚ್ಚಾಗಿ ಧೋರಣೆ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಪವನ್ ಕುಮಾರ್, ರೈತ ಮೋರ್ಚಾ ಉಪಾಧ್ಯಕ್ಷ ರಾಮಲಿಂಗಯ್ಯ, ಮೋಹನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಸ್ವಾಮಿ, ಗಿರೀಶ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್, ನಾಗರಾಜು, ಪಪಂ ಸದಸ್ಯ ಪ್ರದೀಪ್ ಕುಮಾರ್, ರಂಗರಾಜು, ಚೇತನರಾಧ್ಯ, ಸುರೇಶ್, ದಯಾನಂದ, ಸಿದ್ದಲಿಂಗಯ್ಯ, ಶ್ರೀನಿವಾಸ್, ಆನಂದ, ನಟರಾಜು, ಹನುಮಂತರಾಜು, ಪ್ರವೀಣ್ ಕುಮಾರ್ ಹಾಜರಿದ್ದರು.
Comments are closed.