ತುಮಕೂರು: ನಗರದಲ್ಲಿ ಗುರುವಾರ ಸಂಜೆ 4.15ರ ವೇಳೆಗೆ ಸುರಿದ ಬಿರುಗಾಳಿ ಮಳೆಗೆ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಘಟನೆ ನಡೆದಿದೆ.
ನಗರದ ರೈಲ್ವೆ ನಿಲ್ದಾಣದ ಮುಂಭಾಗವೇ ಬಿರುಗಾಳಿ ಮಳೆಗೆ 2 ವಿದ್ಯುತ್ ಕಂಬ ಅರ್ಧಕ್ಕೆ ಮುರಿದು ಬಿದ್ದಿದೆ, ಹಾಗೆಯೇ ರೈಲ್ವೆ ನಿಲ್ದಾಣ ರಸ್ತೆಯಲ್ಲೇ ಬಿರುಗಾಳಿಗೆ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದರಿಂದ ಮತ್ತೆ 2 ವಿದ್ಯುತ್ ಕಂಬ ರಸ್ತೆಗೆ ಮುರಿದು ಬಿದ್ದಿದೆ.
ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದಂತೆ ರೈಲ್ವೆ ನಿಲ್ದಾಣ ರಸ್ತೆಯ ಫುಟ್ ಪಾತ್ ಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವರ್ತಕರು ಜೀವ ಬಿಗಿ ಹಿಡಿದು ಅಲ್ಲಿಂದ ಓಡಿ ಹೋಗಿದ್ದಾರೆ, ವಿದ್ಯುತ್ ಕಂಬಗಳು ಮುರಿದು ಬಿದ್ದಾಗ ವಿದ್ಯುತ್ ಪ್ರವಹಿಸುತ್ತಿತ್ತು ಎನ್ನಲಾಗಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ, ಅನಾಹುತ ಸಂಭವಿಸಿಲ್ಲ.
ರೈಲ್ವೆ ನಿಲ್ದಾಣದ ಮುಂಭಾಗದಲ್ಲೇ ವಿದ್ಯುತ್ ಕಂಬಗಳು ಬಿರುಗಾಳಿಗೆ ಅರ್ಧಕ್ಕೆ ಮುರಿದು ಎಲ್ ಐ ಸಿ ಕಚೇರಿ ಕಡೆಗೆ ಹೋಗುವ ರಸ್ತೆಗೆ ವಿದ್ಯುತ್ ತಂತಿಗಳ ಸಮೇತ ಅಡ್ಡಲಾಗಿ ಬಿದ್ದಿದ್ದರಿಂದ ಈ ರಸ್ತೆಯನ್ನು ಬಂದ್ ಮಾಡಲಾಗಿತ್ತು, ಇನ್ನೊಂದೆ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ವಸತಿ ಗೃಹಗಳ ಪಕ್ಕದಲ್ಲಿದ್ದ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಸಮೀಪದಲ್ಲೇ ಇದ್ದ 2 ವಿದ್ಯುತ್ ಕಂಬ ಧರೆಗುರುಳಿವೆ.
ಈ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ಫುಟ್ ಪಾತ್ ವ್ಯಾಪಾರಿಗಳು ತಕ್ಷಣ ತಮ್ಮ ಜೀವ ರಕ್ಷಣೆಗಾಗಿ ಅಂಗಡಿಗಳಿಂದ ಹೊರ ಓಡಿ ಬಂದಿದ್ದಾರೆ, ಆದರೆ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.
ಘಟನೆಯ ಸುದ್ದಿ ತಿಳಿದ ಕೂಡಲೇ ಮಹಾ ನಗರ ಪಾಲಿಕೆ, ಪೊಲೀಸ್ ಇಲಾಖೆ, ಬೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಧರೆಗುರುಳಿರುವ ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದರು.
Comments are closed.