ಒಣಗಿರುವ ಮರ ತೆರವಿಗೆ ಸಾರ್ವಜನಿಕರ ಒತ್ತಾಯ

16

Get real time updates directly on you device, subscribe now.


ತುಮಕೂರು: ನಗರದ ಬಿ.ಹೆಚ್. ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಹಳ್ಳಿಮರ ಇದ್ದು, ಈ ಮರದ ಬಹುತೇಕ ಕೊಂಬೆಗಳು ಒಣಗಿದ ಸ್ಥಿತಿಯಲ್ಲಿವೆ. ಮಳೆ, ಬಿರುಗಾಳಿ ಬಂದಾಗ ಈ ಮರದ ಒಣಗಿದ ಕೊಂಬೆಗಳು ಮುರಿದು ಬಿದ್ದು ಅವಾಂತರ ಸೃಷ್ಟಿಯಾಗುತ್ತಿವೆ.

ಬಹು ವರ್ಷಗಳ ಹಳ್ಳಿ ಮರ ಇದಾಗಿರುವುದರಿಂದ ಬಹುತೇಕ ಕೊಂಬೆಗಳು ಒಣಗಿವೆ, ಮಳೆ, ಗಾಳಿ ಬಂದಾಗ ಒಣಗಿರುವ ಈ ಮರದ ಕೊಂಬೆಗಳು ಕೆಳಗೆ ಬಿದ್ದು ಅನಾಹುತ ಸಂಭವಿಸುತ್ತಿವೆ, ಹಾಗಾಗಿ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಇತ್ತ ಗಮನ ಹರಿಸಿ ಈ ಮರವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಹಾನಗರ ಪಾಲಿಕೆ ಕಚೇರಿ ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯ ಎಡಬದಿಯಲ್ಲಿ ಈ ಹಳೆಯ ಹಳ್ಳಿ ಮರವಿದ್ದು, ಈ ಮರದ ಅಕ್ಕಪಕ್ಕ ಹೋಟೆಲ್ ಮತ್ತು ಖಾಸಗಿ ಆಸ್ಪತ್ರೆಗಳು, ಡಯಾಗ್ನಸ್ಟಿಕ್ ಸೆಂಟರ್, ಮೆಡಿಕಲ್ ಸ್ಟೋರ್ ಗಳು, ಜೆರಾಕ್ಸ್ ಅಂಗಡಿ ಸೇರಿದಂತೆ ಇನ್ನಿತರೆ ಅಂಗಡಿ ಮಳಿಗೆಗಳು ಇವೆ, ಪ್ರತಿನಿತ್ಯ ಈ ಅಂಗಡಿಗಳು, ಆಸ್ಪತ್ರೆ ಹಾಗೂ ಹೋಟೆಲ್ ಗೆ ನೂರಾರು ಜನ ಬಂದು ಹೋಗುತ್ತಿರುತ್ತಾರೆ, ಜೊತೆಗೆ ಮಹಾನಗರ ಪಾಲಿಕೆ ಕಚೇರಿ ಹಾಗೂ ರೈಲ್ವೆ ನಿಲ್ದಾಣಕ್ಕೂ ಇದೇ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಬೇಕಾಗಿದೆ, ಮಳೆ ಗಾಳಿ ಬಂದರೆ ಈ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ, ಆದ್ದರಿಂದ ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಅನಾಹುತ ಸಂಭವಿಸುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ.

ಬೃಹದಾಕಾರವಾಗಿರುವ ಈ ಮರದ ಬುಡಕ್ಕೆ ಸಿಮೆಂಟ್ ನಿಂದ ಕಟ್ಟೆ ನಿರ್ಮಿಸಲಾಗಿದೆ, ಹಾಗಾಗಿ ಬುಡ ಮೇಲಾಗುವ ಸಮಸ್ಯೆ ಎದುರಾಗದಿದ್ದರೂ ಕೊಂಬೆಗಳು ಮಾತ್ರ ಮಳೆ ಗಾಳಿಗೆ ಮುರಿದು ಬೀಳುತ್ತಿವೆ, ಅಲ್ಲದೆ ಈ ಮರದ ಕೊಂಬೆಗಳ ಮೇಲೆಯೇ ವಿದ್ಯುತ್ ತಂತಿಗಳು ಹಾದುಹೋಗಿವೆ, ಹಾಗಾಗಿ ಏನಾದರೂ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಒಣಗಿರುವ ಈ ಮರ ತೆರವುಗೊಳಿಸಲು ಮುಂದಾಗಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಈ ಮರದ ಕೆಳಗೆ ನಿಲ್ಲಿಸುವ ಕಾರುಗಳು, ದ್ವಿಚಕ್ರ ವಾಹನಗಳು, ಆಟೋಗಳು ಸಹ ಮಳೆ ಗಾಳಿ ಬಂದ ಸಂದರ್ಭದಲ್ಲಿ ಕೊಂಬೆಗಳು ಮುರಿದು ಬಿದ್ದು ಜಖಂಗೊಂಡಿರುವ ನಿದರ್ಶನಗಳೂ ಇವೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,

ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ರೈಲ್ವೆ ನಿಲ್ದಾಣಕ್ಕೆ, ಮಹಾನಗರ ಪಾಲಿಕೆ ಕಚೇರಿಗೆ, ಪ್ರವಾಸಿ ಮಂದಿರಕ್ಕೆ ಓಡಾಡುತ್ತಾರೆ, ಮಳೆ ಬಂದ ಸಂದರ್ಭಲ್ಲೂ ಸಹ ಈ ಮರದ ಸಮೀಪವೇ ಜನ ನಿಲ್ಲುವುದು ಕಂಡು ಬರುತ್ತಿದೆ, ಆದ್ದರಿಂದ ಕೂಡಲೇ ಮುನ್ನೆಚ್ಚರಿಕಾ ಕ್ರಮವಾಗಿ ಈ ಹಳೆಯ ಹಳ್ಳಿ ಮರವನ್ನು ತೆರವುಗೊಳಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!