ತುಮಕೂರು: ಅಕ್ಷಯ ತಾಂತ್ರಿಕ ಮಹಾ ವಿದ್ಯಾಲಯ, ಜೂನ್ 26 ಮತ್ತು 27 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಹಾಗೂ ಏಟ್ರಿಯ ತಾಂತ್ರಿಕ ಮಹಾ ವಿದ್ಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಎಮರ್ಜಿಂಗ್ ಟೆಕ್ನಾಲಜಿಸ್ ಇನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಎಂಬ ವಿಷಯ ಕುರಿತ ಪ್ರಥಮ ಅಂತಾರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿದೆ ಎಂದು ಅಕ್ಷಯ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ.ಶ್ರೀನಿವಾಸರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಅದರಲ್ಲಿಯೂ ಇಂಜಿನಿಯರಿಂಗ್ ಶಿಕ್ಷಣದಲ್ಲಿನ ಜ್ಞಾನ ವೃದ್ಧಿಸುವ ಮತ್ತು ಹಂಚಿಕೊಳ್ಳುವ ಸಲುವಾಗಿ ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ನಮ್ಮ ಕಾಲೇಜಿನ ವತಿಯಿಂದ ಆಯೋಜಿಸಲಾಗಿದೆ ಎಂದರು.
ಸಮ್ಮೇಳನದಲ್ಲಿ ದೇಶದ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 175 ಸಂಶೋಧಕರು ವಿಷಯ ಮಂಡನೆ ಮಾಡ ಲಿದ್ದು, ಇದರಲ್ಲಿ ಆನ್ ಲೈನ್ ಮೂಲಕ ಸುಮಾರು 45 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ, ಇದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಅಕ್ಷಯ ತಾಂತ್ರಿಕ ಮಹಾ ವಿದ್ಯಾಲಯ, ವಿಟಿಯು ಮತ್ತು ಎಟ್ರಿಯಾ ಕಾಲೇಜಿನ ಸಹಯೋಗದಲ್ಲಿ ಮಾಡಿಕೊಳ್ಳಲಾಗಿದೆ, ಸಂಶೋಧನಾ ಪ್ರಬಂಧ ಮಂಡನೆಗೆ ಬರುವ ಸಂಶೋಧನಾರ್ಥಿಗಳಿಗೆ ಊಟ, ವಸತಿ, ಸಂಚಾರ ವ್ಯವಸ್ಥೆ ಯನ್ನು ಕಾಲೇಜಿನ ವತಿಯಿಂದ ಮಾಡಲಾಗಿದೆ ಎಂದು ತಿಳಿಸಿದರು.
ಅಕ್ಷಯ ತಾಂತ್ರಿಕ ಮಹಾ ವಿದ್ಯಾಲಯದ ಡೀನ್ ಹಾಗೂ ಸಮ್ಮೇಳನದ ಆಯೋಜನ ಸಮಿತಿ ಅಧ್ಯಕ್ಷ ಡಾ.ಯತೀಶ್.ಎಲ್. ಮಾತನಾಡಿ, ಕಳೆದ ಐದು ತಿಂಗಳಿನಿಂದ ವಿಟಿಯು ಮಾರ್ಗದರ್ಶನದಂತೆ ಎಲ್ಲಾ ನೀತಿ, ನಿಯಮಗಳನ್ನು ಅನುಸರಿಸಿ ಸಮ್ಮೇಳನ ನಡೆಸಲು ಅನುಮೋದನೆ ಪಡೆಯಲಾಗಿದೆ, ನಿರಂತರ ಪ್ರಚಾರದ ಫಲವಾಗಿ ದೇಶದಾದ್ಯಂತ ಸುಮಾರು 300ಕ್ಕೂ ಹೆಚ್ಚು ಪ್ರಂಬಂಧಗಳು ಮಂಡನೆಗೆ ಬಂದಿದ್ದು, ಅವುಗಳಲ್ಲಿ 225ನ್ನೂ ಸಮಿತಿ ಅಂತಿಮಗೊಳಿಸಿತ್ತು, ಅವರಲ್ಲಿ ಸುಮಾರು 175 ಜನರು ನಿಗದಿತ ಅವಧಿಯಲ್ಲಿ ಬಂದು ತಮ್ಮ ಪ್ರಬಂಧ ಮಂಡನೆ ಮಾಡಲು ನೋಂದಾಯಿಸಿದ್ದಾರೆ, ಒಟ್ಟಾರೆ ನಾಲ್ಕು ನೂರು ಜನರು ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ, ಪ್ರತಿ ಸುತ್ತಿನಲ್ಲಿ 6 ಪೇಪರ್ ಗಳಂತೆ ಒಂದು ದಿನಕ್ಕೆ 60 ಪೇಪರ್ ಗಳು ಮಂಡನೆಯಾಗಲಿದೆ, ದೆಹಲಿ ವಿವಿಯ ಸುಮಾರು 45 ಜನರು ಅನ್ ಲೈನ್ ಮೂಲಕ ಪ್ರಬಂಧ ಮಂಡನೆಗೆ ಅವಕಾಶ ಕೋರಿದ್ದು, ಅದಕ್ಕೂ ಸಹ ಅನುಮತಿ ನೀಡಲಾಗಿದೆ, ಪ್ರತಿ ಸುತ್ತಿನ ಪ್ರಬಂದ ಮಂಡನೆಯಲ್ಲಿ ಅತ್ಯುತ್ತಮ ಪ್ರಬಂಧಕ್ಕೆ ಬಹುಮಾನ ನೀಡಲಾಗುವುದು, ಅಲ್ಲದೆ ಮಂಡನೆಯಾದ ಎಲ್ಲಾ ಪ್ರಬಂಧಗಳನ್ನು ಒಳಗೊಂಡು ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಹಾಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಸಣ್ಣಮಾರೇಗೌಡ ಇತರರು ಇದ್ದರು.
Comments are closed.