ತುಮಕೂರು: ವಿದ್ಯಾರ್ಥಿ ದಿಸೆಯಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯಳಾಗಿ, ಹಲವಾರು ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಕನ್ನಡ ನಾಡು ನುಡಿ ಕಟ್ಟುವ ವಿಚಾರದಲ್ಲಿ ಕೆಲಸ ಮಾಡಿದ್ದು, ಕನ್ನಡ ಸಾಹಿತ್ಯಾಸಕ್ತರು ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ಮಹದಾಸೆಯೊಂದಿಗೆ ಕಸಾಪ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದಾಗಿ ಲೇಖಕಿ ಹಾಗೂ ಹೋರಾಟಗಾರ್ತಿ ಡಾ.ಬಿ.ಸಿ.ಶೈಲಾ ನಾಗರಾಜು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1986ರಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆಯುವ ಮೂಲಕ ಅಂದಿನಿಂದಲೂ ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸದಲ್ಲಿ ತೊಡಗಿದ್ದೇನೆ, ಇದುವರೆಗೂ 15 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು,ಐದು ವ್ಯಕ್ತಿ ಚಿತ್ರಗಳನ್ನು ಸಂಗ್ರಹಿಸುವ ಮೂಲಕ ರಾಜ್ಯ ಸರಕಾರದ ಕಿತ್ತೂರುರಾಣಿ ಚನ್ನಮ್ಮ ಪ್ರಶಸ್ತಿಯ ಜೊತೆಗೆ 10ಕ್ಕೂ ಹೆಚ್ಚು ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕಳೆದ ಐದು ವರ್ಷಗಳಿಂದ ತುಮಕೂರು ತಾಲೂಕು ಕಸಾಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಕಟ್ಟುವಲ್ಲಿ ಮಂಚೂಣಿಯಲ್ಲಿದ್ದೇನೆ. ಹಾಗಾಗಿ ಈ ಬಾರಿಯ ಕಸಾಪ ಚುನಾವಣೆಯಲ್ಲಿ ಕನ್ನಡ ಸಾಹಿತ್ಯಾಸಕ್ತರು ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಕಳೆದ ಐದು ವರ್ಷಗಳಲ್ಲಿ ಕಸಾಪ ಅಧ್ಯಕ್ಷರಾಗಿದ್ದ ಸಹೋದರಿ ಬಾ.ಹ.ರಮಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣವಾಗಿದೆ, ಅದೇ ರೀತಿ ಎಲ್ಲಾ ತಾಲೂಕುಗಳಲ್ಲಿ ಕಸಾಪ ಭವನ ನಿರ್ಮಿಸಬೇಕೆಂಬುದು ನಮ್ಮ ಆಶಯವಾಗಿದೆ, ಯುವ ಜನರನ್ನು ಸಾಹಿತ್ಯದ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಗ್ರಾಮಾಂತರದ ಶಾಲಾ, ಕಾಲೇಜುಗಳಲ್ಲಿ ಸಾಹಿತ್ಯ ಸೌರಭ ಮತ್ತು ವಿದ್ಯಾರ್ಥಿ ಕವಿಗೋಷ್ಠಿ ಹೆಸರಿನಲ್ಲಿ ಸಾಹಿತ್ಯ ಕಾರ್ಯಕ್ರಮ, ಭಾಷಾ ಕಮ್ಮಟ, ದೇಶಿ ಉತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಿದ್ದೇನೆ, ಅಲ್ಲದೆ ಕನ್ನಡ ಶಾಲೆಗಳ ಉಳಿವಿಗಾಗಿ ಗ್ರಾಮೀಣ ಶಾಲೆಗಳ ದತ್ತು ಪಡೆಯುವಂತಹ ಯೋಜನೆ ರೂಪಿಸಲಿದ್ದೇನೆ ಎಂದು ಅಭ್ಯರ್ಥಿ ಡಾ.ಶೈಲಾನಾಗರಾಜು ತಿಳಿಸಿದರು.
ಸಾಹಿತ್ಯ ಪರಿಷತ್ತು ಎಂದಿಗೂ ರಾಜಕೀಯ ವೇದಿಕೆಯಲ್ಲ. ನನ್ನ ಕೆಲ ಸಹ ಸ್ಪರ್ಧಿಗಳು ಅಲ್ಲಲ್ಲಿ ರಾಜಕೀಯ ಚುನಾವಣೆಯ ರೀತಿಯ ನಡೆದುಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಅಂತಹ ಯಾವುದೇ ಪ್ರಚಾರದ ಕ್ರಿಯೆಗಳಿಗೆ ನಾನು ಇಳಿಯುವುದಿಲ್ಲ, ಕಸಾಪ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ರಾಜಕೀಯಕ್ಕೆ ಹೊರತಾದ ಸಂಸ್ಥೆ. ಹಾಗಾಗಿ ರಾಜಕೀಯ ಹೊರತಾದ ವ್ಯಕ್ತಿಗಳು ಆರಿಸಿ ಬರಬೇಕೆಂಬುದು ನಮ್ಮ ಆಶಯ, ಹಾಗಾಗಿ ಈಗಾಗಲೇ ಸಾಹಿತಿಯಾಗಿ ಗುರುತಿಸಿಕೊಂಡಿರುವ ನನಗೆ ಬೆಂಬಲ ನೀಡಲಿದ್ದಾರೆಂಬ ನಂಬಿಕೆ ನನಗಿದೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಮಲ್ಲಿಕಾ ಬಸವರಾಜು ಮಾತನಾಡಿ, ಸಹೋದರಿ ಶೈಲಾ ನಾಗರಾಜು ಓರ್ವ ಉತ್ತಮ ಸಂಘಟನಾ ಚತುರರು, ಅಲ್ಲದೆ ಹಲವಾರು ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ, ಹಾಗಾಗಿ ತುಮಕೂರು ಜಿಲ್ಲಾ ಲೇಖಕಿಯರ ಸಂಘ ಅವರನ್ನು ಬೆಂಬಲಿಸಲು ತೀರ್ಮಾನಿಸಿದೆ ಎಂದರು.
ಈ ವೇಳೆ ಅನ್ನಪೂರ್ಣ ವೆಂಕಟನಂಜಪ್ಪ, ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಸಿ.ಎನ್.ಸುಗುಣಾದೇವಿ, ಕಸಾಪ ಪದಾಧಿಕಾರಿಗಳಾದ ರಾಣಿ ಚಂದ್ರಶೇಖರ್, ರಾಕ್ಲೈನ್ ರವಿಕುಮಾರ್, ಶಿಕ್ಷಕ ಮಹಾಲಿಂಗಪ್ಪ, ಮಹಿಳಾ ಮುಖಂಡರಾದ ಜಯಮ್ಮ ಕವನಯ್ಯ, ಶಿವರಾಜು, ಮಂಜುಳ, ಅಂಬಿಕಾ, ತೋಪನಯ್ಯ ಮತ್ತಿತರರು ಇದ್ದರು.
ಕನ್ನಡ ಸಾಹಿತ್ಯಾಸಕ್ತರು ನನ್ನನ್ನು ಬೆಂಬಲಿಸ್ತಾರೆ: ಶೈಲಾ
Get real time updates directly on you device, subscribe now.
Comments are closed.