ತುಮಕೂರು: ಯೋಗದ ಪ್ರಾಧಾನ್ಯತೆ ಭಾರತ ಹೊರತು ಪಡಿಸಿ ಇತರೆ ದೇಶಗಳಲ್ಲಿ ಪ್ರತಿನಿತ್ಯದ ಅಭ್ಯಾಸವಾಗಿದೆ, ಭಾರತದ ಜನಸಂಖ್ಯೆ ಪರಿಗಣಿಸಿದಾಗ ಯೋಗ ಮತ್ತು ಧ್ಯಾನದ ಅವಶ್ಯಕತೆ ಭಾರತೀಯರಿಗಿದೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿವಿಯ ಯೋಗ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ 21 ದಿನಗಳ ಯೋಗ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸ್ವಸ್ಥ ದೇಶ, ದೇಹ, ಮನಸ್ಸಿನ ಆರೋಗ್ಯಕ್ಕಾಗಿ ಯೋಗ ದಿನನಿತ್ಯದ ಅಗತ್ಯವಾಗಬೇಕು, ಖಾಯಿಲೆ ರಹಿತ ದೇಹ, ಔಷಧಿ ಮುಕ್ತ ರಾಷ್ಟ್ರವಾಗಲು ಯೋಗ ಬದುಕಿನ ಅವಿಭಾಜ್ಯ ಅಂಗವಾಗಬೇಕು, ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಯೋಗ ಅವಶ್ಯಕ ಎಂದರು.
ಅಮೆರಿಕದ ಯೋಗ ಯೂನಿವರ್ಸಿಟಿ ಆಫ್ ಅಮೆರಿಕಾಸ್ ಸಂಸ್ಥೆಯ ಅಕಾಡೆಮಿಕ್ ಕೌನ್ಸಿಲ್ ಅಧ್ಯಕ್ಷ ಡಾ.ಎಂ.ಕೆ.ನಾಗರಾಜ್ ರಾವ್ ಮಾತನಾಡಿ, ಯೋಗ ಜೀವನ ಶೈಲಿಯಾಗಬೇಕಿದೆ, ವಿಶ್ವ ವಿದ್ಯಾಲಯಗಳಲ್ಲಿ ಯೋಗ ಅಭ್ಯಾಸ ಪ್ರಮುಖ ವಿಷಯವಾಗಬೇಕು, ಭಾರತದ ಸಂಸ್ಕೃತಿ ಬಲಗೊಳಿಸಲು ಯೋಗ ಅವಶ್ಯಕ ಎಂದರು.
ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಯೋಗ ಧ್ಯೇಯದೊಂದಿಗೆ ಮಹಿಳೆಯರು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಮಾಡಬೇಕು ಎಂದರು.
21 ದಿನಗಳ ಯೋಗ ಸರ್ಟಿಫಿಕೇಟ್ ಕೋರ್ಸ್ಗೆ ನೋಂದಾಯಿಸಿಕೊಂಡ ಜಿಲ್ಲೆಯ ಸಾರ್ವಜನಿಕರು, ವಿವಿಯ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ, ಯೋಗ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ.ಎ. ಎಂ.ಮಂಜುನಾಥ್, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಟ್ ಭಾಗವಹಿಸಿದ್ದರು.
Comments are closed.