ತುಮಕೂರು: ಜಿಲ್ಲೆಯಲ್ಲಿ ಜೂನ್ 30 ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಿಯಮಾನುಸಾರ ಕ್ರಮ ಬದ್ಧವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣ, ಮೊಬೈಲ್ ಫೋನ್ ಕೊಂಡೊಯ್ಯದಂತೆ ಸಮಗ್ರವಾಗಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕೆಂದು ನಿರ್ದೇಶಿಸಿದರು.
ತುಮಕೂರು ನಗರದ 17 ಹಾಗೂ ಮಧುಗಿರಿ ಪಟ್ಟಣದ 5 ಪರೀಕ್ಷಾ ಕೇಂದ್ರ ಸೇರಿ ಒಟ್ಟು 22 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಕ್ಕೆ ಕುಡಿಯುವ ನೀರು, ಶೌಚಾಲಯ, ಗಾಳಿ- ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಲ್ಲದೆ, ಎಲ್ಲಾ ಕೇಂದ್ರಗಳಿಗೂ ಆರೋಗ್ಯ ಸಹಾಯಕರನ್ನು ನಿಯೋಜಿಸಬೇಕು, ಪರೀಕ್ಷಾರ್ಥಿಗಳಿಗೆ ಕಾಣುವಂತೆ ಕೊಠಡಿ ಹಂಚಿಕೆ ಮಾಹಿತಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ತುಮಕೂರು) ಕೆ.ಮಂಜುನಾಥ್ ಹಾಗೂ ಉಪ ನಿರ್ದೇಶಕ (ಮಧುಗಿರಿ) ಮಂಜುನಾಥ್ ಅವರು ಜಿಲ್ಲೆಯಲ್ಲಿ ತುಮಕೂರಿನ ಪರೀಕ್ಷಾ ಕೇಂದ್ರಗಳಲ್ಲಿ 4363 ಹಾಗೂ ಮಧುಗಿರಿ ಪರೀಕ್ಷಾ ಕೇಂದ್ರಗಳಲ್ಲಿ 1120 ಸೇರಿ 5483 ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲಿದ್ದಾರೆ, ಪರೀಕ್ಷೆ ಜೂನ್ 30ರ ಬೆಳಗ್ಗೆ 9.30 ರಿಂದ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 2 ರಿಂದ 4.30 ಗಂಟೆವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಶಿಕ್ಷಣ ಅಧಿಕಾರಿ ಹಾಗೂ ಪರೀಕ್ಷಾ ನೋಡಲ್ ಅಧಿಕಾರಿ ರಂಗದಾಸಪ್ಪ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಭಾಗವಹಿಸಿದ್ದರು.
Comments are closed.