ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಲಿ: ಡೀಸಿ

25

Get real time updates directly on you device, subscribe now.


ತುಮಕೂರು: ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ಸರ್ಕಾರಿ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನ ಗೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ತಾಲ್ಲೂಕಿನ ಕೋರ ಹೋಬಳಿ ಮುದ್ದೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಆಡಳಿತವನ್ನು ಜನರ ಬಳಿ ತಂದು ಜನರ ಸಮಸ್ಯೆ ಪರಿಹರಿಸುವುದೇ ಜನ ಸ್ಪಂದನ ಕಾರ್ಯಕ್ರಮದ ಉದ್ದೇಶವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರಲ್ಲದೆ, ಅಧಿಕಾರಿಗಳು ಸರ್ಕಾರಿ ಕೆಲಸವನ್ನು ತಮ್ಮ ಮನೆಯ ಕೆಲಸದಂತೆ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.

ತಾಲ್ಲೂಕಿನ ವಿವಿಧ ಭಾಗದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತಲುಪಲು ಪರದಾಡುತ್ತಿರುವ ಬಗ್ಗೆ ಸಾರ್ವಜನಿಕರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ತಾಲ್ಲೂಕಿನಲ್ಲಿ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆಗೆ ಕ್ರಮ ವಹಿಸಬೇಕು, ಅಲ್ಲದೆ ಶಿರಾ ಮತ್ತು ತುಮಕೂರು ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಕೋರ ಗ್ರಾಮದಿಂದ ಹಾದು ಹೋಗುವಂತೆ ಕ್ರಮ ಕೈಗೊಂಡು ವಿದ್ಯಾರ್ಥಿ ಸ್ನೇಹಿ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರಿಗೆ ಸೂಚನೆ ನೀಡಿದರು.
ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ವೃದ್ಧಾಪ್ಯ ವೇತನ, ಆಯುಷ್ಮಾನ್ ಭಾರತ್ ಕಾರ್ಡ್, ಕಾರ್ಮಿಕ ಕಾರ್ಡ್, ರಾಗಿ ಬಿತ್ತನೆ ಬೀಜ ಸೇರಿದಂತೆ ವಿವಿಧ ಇಲಾಖೆಗಳ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಕೋರ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಧು, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಎಂ. ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!