ಹೇಮೆ ಉಳಿಸಿಕೊಳ್ಳಲು ತುಮಕೂರು ಬಂದ್

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ರದ್ದಿಗೆ ಆಗ್ರಹ- ಜೂ.25ಕ್ಕೆ ಬಂದ್

28

Get real time updates directly on you device, subscribe now.


ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಜೂನ್ 20 ರಂದು ನೀರಾವರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಿಂಕ್ ಕೆನಾಲ್ ನ ಸಾಧಕ, ಭಾದಕಗಳ ಬಗ್ಗೆ ತಜ್ಞರ ವರದಿ ಬರುವವರೆಗೂ ಕಾಮಗಾರಿ ನಿಲ್ಲಿಸುವಂತೆ ತುಮಕೂರು ಜಿಲ್ಲೆಯ ಶಾಸಕರು ಮಾಡಿದ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಜೂನ್ 25 ರಂದು ಕರೆದಿರುವ ತುಮಕೂರು ಬಂದ್ ಜರುಗಲಿದೆ ಎಂದು ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಹಾಗೂ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮದೆ ಸರಕಾರವಿದೆ, ನಾವು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಮಾಡಿಯೇ ತೀರುತ್ತೇವೆ ಎಂಬಂತೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಬಂದಂತೆ ಕಾಣುತ್ತಿದೆ, ತಜ್ಞರ ವರದಿ ಬರುವವರೆ ಗಾದರೂ ಕಾಮಗಾರಿ ಸ್ಥಗಿತಗೊಳಿಸಿ ಎಂದರೆ ಒಪ್ಪುತ್ತಿಲ್ಲ, ತುಮಕೂರು ಜಿಲ್ಲೆಯ ಜನರ ಮನವಿಗೆ ಸ್ಪಂದನೆ ಇಲ್ಲ ಎಂದಾದ ಮೇಲೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ, ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಜೈಲ್ ಬರೋ, ಪಾದಯಾತ್ರೆ, ಗೋಲಿಬಾರ್ ನಂತಹ ಯಾವ ಹೋರಾಟಕ್ಕೂ ನಾವು ಸಿದ್ಧ, ಜಿಲ್ಲೆಯ ಜನರಿಗಾಗಿ ನನ್ನ ಪ್ರಾಣ ನೀಡಲು ಸಿದ್ಧರಿದ್ದೇವೆ, ಜೂನ್ 25 ರಂದು ಕರೆದಿರುವ ತುಮಕೂರು ಬಂದ್ ನಡೆಯಲಿದೆ ಎಂದರು.

ಶಾಸಕ ಬಿ.ಸುರೇಶಗೌಡ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರೆದಿದ್ದ ಸಭೆಯಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ನಿಂದ ಜಿಲ್ಲೆಯ ಜನರಿಗೆ ಆಗುವ ಸಮಸ್ಯೆಗಳ ಬಗ್ಗೆ ಎಷ್ಟೇ ಮನವರಿಕೆ ಮಾಡಿಕೊಟ್ಟರು ಅವರ ಹಟವನ್ನು ಬಿಡುತ್ತಿಲ್ಲ, ಹಾಗಾಗಿ ಜೂನ್ 25ರ ತುಮಕೂರು ಬಂದ್ ನಡೆಯಲಿದೆ, ನಮ್ಮದೇ ಸರಕಾರವಿದೆ, ಏನು ಬೇಕಾದರೂ ಮಾಡುತ್ತೇವೆ ಎಂಬ ಧೋರಣೆ ಅವರಲ್ಲಿದೆ, ಹೇಮಾವತಿ ಲಿಂಕ್ ಕೆನಾಲ್ ನಿಂದ 70-167 ಕಿ.ಮೀ. ವರೆಗಿನ ಸುಮಾರು 23 ವಿತರಣಾ ನಾಲೆ, ಅಲ್ಲದೆ 28 ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ತುಮಕೂರು, ಮಧುಗಿರಿ, ಕೊರಟಗೆರೆ ಪಟ್ಟಣಗಳಿಗೆ ಕುಡಿಯುವ ನೀರು ಸಿಗುವುದಿಲ್ಲ, ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿನ ತಾಲೂಕುಗಳ ನಡುವೆ ಘರ್ಷನೆ ಸಂಭವಿಸಲಿದೆ, ಹಾಗಾಗಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ರದ್ದು ಪಡಿಸಬೇಕು.ಹೇಮಾವತಿ ಮೂಲ ನಾಲೆಯ ಮೂಲಕ ಕುಣಿಗಲ್,ಮಾಗಡಿ ತಾಲೂಕುಗಳಿಗೆ ನೀರು ತೆಗೆದುಕೊಂಡು ಹೋಗಲಿ ಎಂದು ಒತ್ತಾಯಿಸಿದರು.

ಹೇಮಾವತಿ ನಾಲಾ ವಿಚಾರಾಗಿ ಜಿಲ್ಲೆಗೆ ಅನ್ಯಾಯವಾದರೂ ಜಿಲ್ಲೆಯ ಇಬ್ಬರು ಸಚಿವರು ಬಾಯಿ ಬಿಡುತ್ತಿಲ್ಲ, ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಗೆ ಸೇರಿದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಿದ್ದಾರೆ, ಮುಂಬರುವ ಜಿಪಂ, ತಾಪಂ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿಯೂ ಜನರು ತಕ್ಕ ಪಾಠ ಕಲಿಸಲಿದ್ದಾರೆ, ಜಿಲ್ಲೆಯ ಸಚಿವರು ಸರಕಾರದ ಮೇಲೆ ಒತ್ತಡ ತಂದು ಕಾಮಗಾರಿ ನಿಲ್ಲಿಸಬೇಕು, ಅಲ್ಲಿಯವರೆಗೆ ಹೋರಾಟ ನಿರಂತರ ಎಂದು ಶಾಸಕ ಸುರೇಶಗೌಡ ತಿಳಿಸಿದರು.

ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ತುಮಕೂರು ಬಂದ್ ಗೆ ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಲಿವೆ, ಜೂನ್ 25ರಂದು ಬೆಳಗ್ಗೆ 10.30ಕ್ಕೆ ಟೌನ್ ಹಾಲ್ ನಿಂದ ಎಂ.ಜಿ.ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು, ಇದರಲ್ಲಿ ಜಿಲ್ಲಾ ಹೊಟೇಲ್ ಮಾಲೀಕರ ಸಂಘ, ಲಾರಿ,ಬಸ್, ಆಟೋ ಚಾಲಕರ ಸಂಘ, ಚಿನ್ನ ಬೆಳ್ಳಿ ಅಂಗಡಿ ಮಾಲೀಕರ ಸಂಘದವರು ಸಹ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಪಂಚಾಕ್ಷರಯ್ಯ, ಊರ್ಡಿಗೆರೆ ಲಕ್ಷ್ಮೀಶ್, ಕೆ.ಪಿ.ಮಹೇಶ್, ಓಂ.ನಮೋ ನಾರಾಯಣ, ಬೆಳಗುಂಬ ಪ್ರಭಾಕರ್, ಸೊಗಡು ಕುಮಾರ ಸ್ವಾಮಿ, ಶಬ್ಬೀರ್ ಅಹಮದ್, ರಾಮಚಂದ್ರರಾವ್, ಡಿ ಎಸ್ ಎಸ್ ನರಸಿಂಹಯ್ಯ, ಕೆ.ಹರೀಶ್, ತರಕಾರಿ ಮಹೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!