ಕುಣಿಗಲ್: ನನಗೆ ರಾಜಕಾರಣದಲ್ಲಿ ನಾಜೂಕಯ್ಯನ ಹಾಗೆ ಪಾತ್ರ ಮಾಡಿಕೊಂಡು ಓಲೈಕೆ ರಾಜಕಾರಣ ಮಾಡಲು ಬರೋಲ್ಲ, ನೇರವಾಗಿ ನುಡಿದು ನೇರ ರಾಜಕಾರಣ ಮಾಡಿ ಅಭ್ಯಾಸ, ಇದು ಕೆಲವರಿಗೆ ಹಿಡಿಸದ ಕಾರಣ ನನ್ನ ಸೋಲಾಗಿರಬಹುದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯ ಪ್ರಚಾರದಲ್ಲೆ ಹೇಳಿದ್ದೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ, ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತೇನೆ, ಮತದ ರೂಪದಲ್ಲಿ ಕೊಡಿ ಎಂದು, ಆದರೆ ಜನತೆಗೆ ನನ್ನ ಕೆಲಸ ಹಿಡಿಸಿಲ್ಲ, ಹೀಗಾಗಿ ಮತವೆಂಬ ಕೂಲಿ ನೀಡದೆ ಹೊಸ ಕುದುರೆ, ಹೊಸ ಮುಖವನ್ನು ಬೆಂಬಲಿಸಿದ್ದಾರೆ, ಈ ಸೋಲನ್ನು ನಾನು ಒಪ್ಪಿಕೊಂಡಿದ್ದೇನೆ, ನನ್ನ ಸೋಲಿಗೆ ಹಲವು ರೀತಿಯ ಕಾರಣ ಇದೆ ಹೊರತು ನನ್ನ ಪಕ್ಷದ ಕಾರ್ಯಕರ್ತರಲ್ಲ, ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ, ಇದಕ್ಕೆ ನಾನು ಅಭಾರಿಯಾಗಿದ್ದೇನೆ, ಪಕ್ಷದ ಯಾವುದೇ ಕಾರ್ಯಕರ್ತನಿಗೂ ತೊಂದರೆ ಆಗದ ರೀತಿಯಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ಸದಾ ಹಿಂದೆ ಇದ್ದು ಶ್ರಮಿಸುತ್ತೇನೆ ಎಂದರು.
10 ವರ್ಷ ಎಂಟು ತಿಂಗಳ ಕಾಲ ತಾಲೂಕಿನ ಜನತೆ ನನಗೆ ಅಧಿಕಾರ ಕೊಟ್ಟಿದ್ದು ಅದಕ್ಕೆ ತಕ್ಕಂತೆ ಜನಪರ ಅಭಿವೃದ್ಧಿ ಕೆಲಸ ಮಾಡಿದ ತೃಪ್ತಿ ಇದೆ, ನೂತನ ಸಂಸದರು ಸಹ ವಿದ್ಯಾವಂತರಾಗಿದ್ದು ಅವರೂ ಸಹ ಅಭಿವೃದ್ಧಿ ಮಾಡಬಹುದು, ಕುಣಿಗಲ್- ನೆಲಮಂಗಲ ಬಳಿ ಬೃಹತ್ ಕೈಗಾರಿಕೆ ಸ್ಥಾಪಿಸಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬಹುದು, ಹಾಸನ ಜಿಲ್ಲೆಯವರಲ್ಲವೆ, ಹಾಸನ ಜಿಲ್ಲೆಯ ರಾಜಕಾರಣಿಗಳ ಖ್ಯಾತಿ ವಿಶ್ವ ವಿಖ್ಯಾತವಾಗಿದೆ, ಆ ಬಗ್ಗೆ ಮಾತನಾಡಲು ಹೋಗುವುದಿಲ್ಲ, ತಾಲೂಕಿಗೆ ಹೇಗೆ ಬಂದೆನೋ ಹಾಗೆ ಹೋಗುತ್ತಿದ್ದೇನೆ, ವಿರೋಧ ಪಕ್ಷದವರು ಆರೋಪಿಸಿದಂತೆ ಇಲ್ಲಿ ಯಾವುದೇ ಕಲ್ಲುಗಣಿಕಾರಿಕೆ ಮಾಡಿಲ್ಲ, ಯಾವುದೇ ಜಮೀನು ಹೊಡೆದಿಲ್ಲ, ತೆರಿಗೆ ಕಟ್ಟದೆ ಪುರಸಭೆ ಜಾಗದಲ್ಲಿ ವ್ಯಾಪಾರ ಮಾಡಿಲ್ಲ, ಅಲ್ಲದೆ ನನ್ನ ಸೋಲಿಸಲು ತಾಲೂಕಿನ ಜೆಡಿಎಸ್, ಬಿಜೆಪಿ ಸಹೋದರರು ಒಂದಾದರು, ಇವರು ಬೇರೆಯಾಗಿ ಎಂದು ನಾನೇನು ಹೇಳಿರಲಿಲ್ಲ, ನಾನು ಜನರಲ್ಲಿ ದೇವರ ಕಂಡು ರಾಜಕಾರಣ ಮಾಡಿದೆ, ಆದರೆ ಗುಡಿಯ ದೇವರಿಗೆ ನಮಸ್ಕಾರ ಮಾಡೋದು ಮರೆತೆ, ಈಗ ನಾ ಕಂಡ ಜನರಲ್ಲಿನ ದೇವರ ನೋಡಿ ಗುಡಿಯ ದೇವರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾನೆ, ವಿಶ್ರಾಂತಿ ಪಡೆಯುತ್ತೇನೆ, ಸದ್ಯಕ್ಕೆ ಯಾವುದೆ ಚುನಾವಣೆ ರಾಜಕೀಯದ ಬಗ್ಗೆ ಅಸಕ್ತಿ ಇಲ್ಲ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಇತ್ತೀಚೆಗೆ ಉದ್ಯಮಿ ಎಲಾನ್ ಮಸ್ಕ್ ಅಭಿಪ್ರಾಯದಂತೆ ಕ್ಷೇತ್ರದಲ್ಲಿ ಬಳಕೆ ಮಾಡಿದ ಇವಿಎಂ ನ ಕೈ ಚಳಕವೆ ಡಿ.ಕೆ.ಸುರೇಶ್ ಅವರ ಸೋಲಿಗೆ ಕಾರಣ, ಮನುಷ್ಯ ಸೃಷ್ಟಿಸಿದ ಇವಿಎಂ ಎಲೆಕ್ಟ್ರಾನಿಕ್ ಯಂತ್ರ ಹೇಗೆ ಬೇಕಾದರೂ ಬಳಕೆ ಮಾಡಬಹುದು, ಮಾಜಿ ಸಂಸದ ಡಿ.ಕೆ.ಸುರೇಶ್ ಹಠಗಾರ, ಛಲಗಾರ, ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ ಜನರ ಮಧ್ಯದಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ, ತಾಲೂಕಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಮಾಜಿ ಸಂಸದರೆ ಹಾಲಿ ಸಂಸದರೆಂಬ ರೀತಿಯಲ್ಲಿ ನಾವು ಭಾವಿಸಿ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇವೆ ಎಂದರು. ಮುಖಂಡರಾದ ಮಾಗಡಯ್ಯ, ರೆಹಾಮಾನ್ ಶರೀಫ್,ರಂಗಸ್ವಾಮಿ, ರಾಮಣ್ಣ ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಹು.ದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟರಾಮು, ಮುಖಂಡರಾದ ಶಂಕರ್, ರಾಮಣ್ಣ, ಪಾಪಣ್ಣ, ನಂಜೇಗೌಡ, ಪುರಸಭೆ ಕಾಂಗ್ರೆಸ್ ಸದಸ್ಯರು ಇತರರು ಇದ್ದರು.
Comments are closed.