5 ಸಾವಿರ ನಿವೇಶನ ಹಂಚಿಕೆ ಗುರಿ ಇದೆ

ಜನರನ್ನು ಕಚೇರಿಗೆ ಅಲೆಸಿದ್ರೆ ಸುಮ್ಮನಿರಲ್ಲ- ಕೆ ಎನ್ ಆರ್ ವಾರ್ನಿಂಗ್

21

Get real time updates directly on you device, subscribe now.


ಮಧುಗಿರಿ: ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ 5 ಸಾವಿರ ನಿವೇಶನ ಹಂಚಿಕೆಯ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಶಾಸಕನಾಗಿದ್ದಾಗ ಕ್ಷೇತ್ರಕ್ಕೆ 16 ಸಾವಿರ ಮನೆ ತಂದಿದ್ದೆ, ಈಗ ನಿವೇಶನಗಳ ಜೊತೆಗೆ ಮೊದಲ ಹಂತದಲ್ಲಿ 1500 ಮನೆಗಳು ಮಂಜೂರಾಗಿದ್ದು, ಎರಡನೇ ಹಂತದಲ್ಲಿ 3500 ಮನೆ ಸೇರಿದಂತೆ ಒಟ್ಟು ಐದು ಸಾವಿರ ಮನೆಗಳಿಗೆ ಬೇಡಿಕೆ ಸಲ್ಲಿಸಿದ್ದು, ಕ್ಷೇತ್ರದ ಎಲ್ಲಾ ಜಾತಿಯ ಬಡವರಿಗೂ ಮನೆಗಳನ್ನು ಒದಗಿಸಬೇಕು, ಅಧಿಕಾರಿಗಳು ತಾರತಮ್ಯ ಮಾಡದೇ ಅರ್ಹರಿಗೆ ಸವಲತ್ತು ವಿತರಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮನೆ ಮತ್ತು ನಿವೇಶನ ವಿತರಿಸಲು ಕ್ರಮ ಕೈಗೊಂಡು ಬಡ ಕುಟುಂಬಗಳು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸಬೇಕಿದೆ ಎಂದರು.

ತಾಲೂಕಿನಲ್ಲಿ 25 ಸಾವಿರಕ್ಕೂ ಹೆಚ್ಚು ಪೌತಿ ಖಾತೆ ಬಾಕಿ ಇದ್ದು, ಅಧಿಕಾರಿಗಳು ಗ್ರಾಮದ ಹಂತದಲ್ಲೇ ಪೌತಿ ಖಾತೆ ಸಮಸ್ಯೆ ಬಗೆ ಹರಿಸಿ, ಹಳ್ಳಿಗಳಲ್ಲಿ ವಯಸ್ಸಾದ ಜನರಿಗೆ ಅಧಿಕಾರಿಗಳೇ ಅವರ ಮನೆಗಳಿಗೆ ಭೇಟಿ ನೀಡಿ ಪಿಂಚಣಿ ಮಂಜೂರಾತಿ ಮಾಡಿಸಿ ಅವರು ಅರ್ಜಿ ಹಿಡಿದುಕೊಂಡು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಹಳ್ಳಿಗಾಡಿನಲ್ಲಿ ನಿವೇಶನ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ನಿವೇಶನ ರಹಿತರಿಗೆ ನಿವೇಶನ ಕೊಡುವ ಕೆಲಸವಾಗಬೇಕು ಎಂದರು.

ಸರಗಳ್ಳತನ ಪ್ರಕರಣದಲ್ಲಿ ಪರಾರಿಯಾಗುತ್ತಿದ್ದ ಆರೋಪಿಯ ಕಾಲಿಗೆ ಗನ್ ನಿಂದ ಶೂಟ್ ಮಾಡಿ ಸೆರೆ ಹಿಡಿದ ಮಧುಗಿರಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಆರೋಪಿಗಳು ಬಹಳಷ್ಟು ಮಹಿಳೆಯರಿಗೆ ತೊಂದರೆ ಕೊಟ್ಟು ಸರಗಳ್ಳತನ ನಡೆಸಿದ್ದರು, ಇವರಿಗೆ ತಕ್ಕ ಪಾಠ ಕಲಿಸಿದ್ದಾರೆ, ತಾಲೂಕಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಡ್ರಗ್ ಮಾಫಿಯಾ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವವರು, ಸರಗಳ್ಳತನ ಮಾಡುವವರು ಯಾರೇ ಆಗಿರಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಪೋಲೀಸ್ ಇಲಾಖೆಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಶ್ರಮ ಪಡಬೇಕು, ಅರ್ಹರಿಗೆ ಸವಲತ್ತು ದೊರೆಯುವಂತೆ ಮಾಡಬೇಕು, ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಆಗಬೇಕು ಎಂದರು.

ಕಂದಾಯ ಇಲಾಖೆಯ ವಿಎ ಮತ್ತು ಆರ್ಐ ವಾರದಲ್ಲಿ ಮೂರು ದಿನ ಗ್ರಾಮದಲ್ಲಿ ಲಭ್ಯವಿದ್ದು ಜುಲೈ ಅಂತ್ಯದ ಒಳಗೆ ನಾಲ್ಕು ಸಾವಿರ ಪೌತಿ ಖಾತೆ ವಿತರಣೆಯಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಮಾತನಾಡಿ ಮುಖ್ಯಮಂತ್ರಿಗಳ ಸೂಚನೆ ಮತ್ತು ನಿರ್ದೇಶನದಂತೆ ಜನಸಾಮಾನ್ಯರ ಕುಂದು ಕೊರತೆ ಅಹವಾಲು ಸ್ವೀಕರಿಸಿ ಸೇವೆ ಒದಗಿಸುವ ವಿಲೇವಾರಿ ಮಾಡುವ ಉದ್ದೇಶದಿಂದ ಜಿಲ್ಲಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ಶೀಘ್ರ ಸಮಸ್ಯೆ ಇತ್ಯರ್ಥ ಪಡಿಸಲು ತಿಳಿಸಿದರು.

ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ತಾಪಂ ಇಓ ಲಕ್ಷ್ಮಣ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಣ್ಣ, ಜಿಪಂ ಉಪ ಕಾರ್ಯದರ್ಶಿ ನರಸಿಂಹಮೂರ್ತಿ, ಪಿಡಬ್ಲ್ಯೂಡಿ ಇಇ ಸುರೇಶ್ ರೆಡ್ಡಿ, ಎಇಇ ರಾಜಗೋಪಾಲ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!