ತುರ್ತು ಪರಿಸ್ಥಿತಿ ದೇಶಕ್ಕೆ ಮಾಡಿದ ಅಪಕೀರ್ತಿ

ಸಂವಿಧಾನದ ಆಶಯಕ್ಕೆ ಇಂದಿರಾ ಗಾಂಧಿಯಿಂದ ಅಪಚಾರ

22

Get real time updates directly on you device, subscribe now.


ತುಮಕೂರು: ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಜನರ ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡಿ ಸಂವಿಧಾನದ ಆಶಯ ದುರ್ಬಲಗೊಳಿಸಿ ದೇಶವನ್ನು ಬಲಿಕೊಟ್ಟ ಅಪಕೀರ್ತಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.

ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವೇದಿಕೆಯಿಂದ ಬುಧವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ತುರ್ತು ಪರಿಸ್ಥಿತಿ- ಸಂವಿಧಾನಕ್ಕೆ ಮಾಡಿದ ಅಪಚಾರ ಎಂಬ ವಿಷಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಅಧಿಕಾರದ ಅನುಕೂಲದ ಅಗತ್ಯ ಪರಿಸ್ಥಿತಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಿಕೊಂಡು ಸಂವಿಧಾನದ ಆಶಯಗಳಿಗೆ ಇಂದಿರಾ ಗಾಂಧಿ ಅಪಚಾರ ಮಾಡಿದರು, ತುರ್ತು ಪರಿಸ್ಥಿತಿಯಲ್ಲಿ ದೇಶದ ಜನ ಅನುಭವಿಸಿದ ಯಾತನೆ ಬಗ್ಗೆ ಇಂದಿನ ತಲೆಮಾರಿನವರಿಗೆ ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪ ಬಂದಾಗ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು, ಈ ವೇಳೆ 1.1 ಲಕ್ಷ ಹೋರಾಟಗಾರರನ್ನು ಜೈಲಿಗೆ ಹಾಕಿಸಿದರು, ಆಗ ಇಡೀ ದೇಶದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು, ಇಂದಿರಾ ಗಾಂಧಿ ಬಗ್ಗೆ ಮಾತನಾಡಲು ಜನ ಹೆದರುವಂತಾಗಿತ್ತು, ಮಾತನಾಡಿದರೆ ಸಾಕು ಅವರನ್ನು ಬಂಧಿಸುತ್ತಿದ್ದರು, ಇಂತಹ ಕರಾಳ ಪರಿಸ್ಥಿತಿಯನ್ನು ದೇಶದ ಜನ ಅನುಭವಿಸಿದರು, ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡಲಾಗಿತ್ತು ಎಂದರು.

ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನವರು ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನ ಆಶಯಗಳನ್ನು ಹರಣ ಮಾಡಿದ್ದ ಬಗ್ಗೆ ಕ್ಷಮೆ ಕೇಳಬೇಕು, ಡಾ.ಅಂಬೇಡ್ಕರ್ ಅವರ ವಿರೋಧದ ನಡುವೆಯೂ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಿ ಸರ್ವಾಧಿಕಾರಿ ಧೋರಣೆ ಅನುಸರಿಸಿತ್ತು ಎಂದು ಎನ್.ರವಿಕುಮಾರ್ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯರು, ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ್ ನಾರಾಯಣ ಮಾತನಾಡಿ, ಬೇರೆ ದೇಶಗಳೊಂದಿಗೆ ಯುದ್ಧ ನಡೆದ ಸಂದರ್ಭದಲ್ಲಿ, ದೇಶದಲ್ಲಿ ತೀವ್ರ ಬರ ಬಂದಾಗ, ಮಿಲಿಟರಿಯವರೇ ದಂಗೆ ಎದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಬಹುದಾದ ಪರಿಸ್ಥಿತಿ ಎದುರಾಗಬಹುದು, ಆದರೆ ಇದಾವುದೂ ಅಲ್ಲದ, ಇಂದಿರಾ ಗಾಂಧಿಯವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ತಮ್ಮ ವಿರುದ್ಧ ಯಾರೂ ಧ್ವನಿ ಎತ್ತಬಾರದು ಎನ್ನುವ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿ, ಹೋರಾಟಗಾರರನ್ನು ಜೈಲಿಗೆ ಹಾಕಿಸಿದ್ದು ಈ ದೇಶದ ಇತಿಹಾಸದಲ್ಲಿ ಕರಾಳ ಛಾಯೆ, ಇಂತಹ ಕರಾಳ ಪರಿಸ್ಥಿತಿಯ ಬಗ್ಗೆ ಇಂದಿನವರು ತಿಳಿಯಬೇಕು ಎಂದು ಹೇಳಿದರು.

ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರನ್ನೇ ದೇಶದ ಜನ ಸೋಲಿಸಿದರು, ಜನತಾ ಪರಿವಾರ ಆಡಳಿತಕ್ಕೆ ಬಂದಿತು, ಇದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವು ಆಯಿತು, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್ ನವರು ಸುಖಾಸುಮ್ಮನೇ ಆರೋಪ ಮಾಡುತ್ತಾರೆ, ಸಂವಿಧಾನದ ಬಗ್ಗೆ ಕಾಂಗ್ರೆಸ್ ನವರಿಗೆ ಬದ್ಧತೆ ಇಲ್ಲ ಎಂದರು.
ಸರ್ಕಾರಿ ಕೈಗಾರಿಕಾ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ವಿ.ಟಿ.ತಿಪ್ಪೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಬಿಜೆಪಿ ವಕ್ತಾರ ವೆಂಕಟೇಶ್ ದೊಡ್ಡೇರಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!