ತುಮಕೂರು: ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿ ಕಡಿತಕ್ಕೊಳಗಾಗುವ ನಾಗರಿಕರಿಗೆ ದಾಖಲೆಗಳ ಪರಿಶೀಲನೆ ಮತ್ತು ಪರಿಹಾರ ಧನ ವಿತರಣೆಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗುವ ವ್ಯಕ್ತಿಗಳಿಗೆ ತಗುಲುವ ಚಿಕಿತ್ಸಾ ವೆಚ್ಚ, ಪರಿಹಾರ ಧನ ಹಾಗೂ ಮರಣ ಸಂಭವಿಸಿದ್ದಲ್ಲಿ ಮರಣ ಹೊಂದಿದವರ ಸಂಬಂಧಿತರಿಗೆ ಮರಣೋತ್ತರ ಪರಿಹಾರಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಲು ಸಮಿತಿ ರಚಿಸುವಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಆಯುಕ್ತರಿಂದ 5 ಮಂದಿಗೆ ಪರಿಹಾರ ಧನ ವಿತರಣೆ
ರೇಬಿಸ್ ನಾಯಿಯ ದಾಳಿಗೆ ಒಳಗಾದ ರಾಮಕೃಷ್ಣ ರಾವ್ ಬಿನ್ ನಾಗಪ್ಪ (65), ಸಂಜೀವಿನಿ ಬಿನ್ ರಮೇಶ್ (9), ಶಿವಮ್ಮ ಕೋಂ ರಾಜಶೇಖರ್ (52), ಜಾಹೀದ್ ಖಾನ್ ಬಿನ್ ನಯಾಜ್ ಖಾನ್ (14) ಮತ್ತು ಬಾಬಾ ಜಾನ್ ಎಂ ಬಿನ್ ಮೆಹಬೂಬ್ ಪಾಷ (30) ಅವರಿಗೆ ತಲಾ 5,000 ರೂ. ಗಳಂತೆ ಪಾಲಿಕೆ ವತಿಯಿಂದ ಆಯುಕ್ತ ಬಿ.ವಿ.ಅಶ್ವಿಜ ಅವರು ಸಂತ್ರಸ್ತರ ಮನೆಗೆ ತೆರಳಿ ಚೆಕ್ ಮೂಲಕ ಪರಿಹಾರ ಧನ ವಿತರಣೆ ಮಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೂ ಸುಮಾರು 500 ಬೀದಿ ನಾಯಿಗಳಿಗೆ ರಿಂಗ್ ವ್ಯಾಕ್ಸಿನೇಷನ್ ಮಾಡಿಸುವ ಕ್ರಮ ವಹಿಸಲಾಗಿದೆ, ವ್ಯಾಕ್ಸಿನೇಷನ್ ಮಾಡಿಸುವ ಸ್ಥಳ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿನ ಸಮುದಾಯ ಮತ್ತು ವೈಯಕ್ತಿಕ ಶೌಚಾಲಯಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ವಚ್ಛತಾ ಪರಿಶೀಲನೆಯ ಪರಿವೀಕ್ಷಣೆ ನಡೆಸಿದರು.
Comments are closed.