ಯುವಕರು ಮಾದಕ ವ್ಯಸನದಿಂದ ದೂರವಿರಲಿ

17

Get real time updates directly on you device, subscribe now.


ತುಮಕೂರು: ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಹೆಚ್ಚು ಆಕರ್ಷಿತರಾಗಿದ್ದಾರೆ, ಮಾದಕ ವಸ್ತುಗಳನ್ನು ಮಾರುವವರಿಂದ, ದುರಭ್ಯಾಸವಿರುವ ಸ್ನೇಹಿತರಿಂದ ಪ್ರಭಾವಿತರಾಗಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಆತಂಕ ವ್ಯಕ್ತಪಡಿಸಿದರು.

ತುಮಕೂರು ವಿವಿಯ ಮನೋ ವಿಜ್ಞಾನ ಅಧ್ಯಯನ, ಸಮಾಜ ಕಾರ್ಯ ಅಧ್ಯಯನ ವಿಭಾಗಗಳು, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಇತರೆ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ವಿಶ್ವ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
11- 12ನೇ ವಯಸ್ಸಿಗೆ ಡ್ರಗ್ಸ್ ಸೇವಿಸುವ ಮಕ್ಕಳನ್ನು ನಾವಿಂದು ಕಾಣಬಹುದು, 1985 ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋ ಟ್ರೋಪಿಕ್ ಡ್ರಗ್ಸ್ ಆಕ್ಟ್ ಪ್ರಕಾರ ಡ್ರಗ್ಸ್ ಸೇವನೆ ಅಪರಾಧವಾಗಿದೆ ಮತ್ತು ದಂಡದೊಂದಿಗೆ 20 ವರ್ಷಗಳ ವರೆಗೆ ಶಿಕ್ಷೆಯಾಗುತ್ತದೆ ಮತ್ತು ಮಾದಕ ವಸ್ತುಗಳನ್ನು, ಉದ್ದೀಪನ ಮದ್ದುಗಳನ್ನು ಮಾರಾಟ ಮಾಡುವ ಔಷಧಿ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಪಿಜಿ ಮತ್ತು ಹಾಸ್ಟೆಲ್ ಗಳಲ್ಲಿ ಮಕ್ಕಳನ್ನುಇರಿಸಲು ಪಾಲಕರಿಗೆ ಭಯವಾಗುತ್ತಿದೆ, ವಿದ್ಯಾರ್ಥಿಗಳಲ್ಲಿರುವ ದುರ್ಬಲ ಮನಸ್ಥಿತಿಯಿಂದ ಮಾದಕ ವಸ್ತುಗಳ ಮತ್ತು ಮದ್ಯದ ಚಟಕ್ಕೆ ದಾಸರಾಗುತ್ತಿದ್ದಾರೆ, ಮಾದಕ ವಸ್ತುಗಳು ಬದುಕನ್ನು ಸರ್ವನಾಶ ಮಾಡಲಿದೆ ಎಂಬ ಸತ್ಯವನ್ನು ಅವರು ಅರಿತುಕೊಳ್ಳಬೇಕು ಎಂದು ಹೇಳಿದರು.

ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ದೇಶದ ಭವಿಷ್ಯ ಯುವಕರ ಕೈಯಲ್ಲಿದೆ, ಮನಸ್ಸು ಮತ್ತು ಆತ್ಮವನ್ನು ಸ್ಥಿರವಾಗಿಟ್ಟುಕೊಂಡಾಗ ದುರಭ್ಯಾಸಗಳ ದಾಸರಾಗಲು ಸಾಧ್ಯವಿಲ್ಲ, ಮಕ್ಕಳ ತಪ್ಪುಗಳಿಂದಾಗಿ ಪೋಷಕರು ತೊಂದರೆ ಅನುಭವಿಸುತ್ತಾರೆ, ಯುವಕರು ಮನಸ್ಸಿನಲ್ಲಿ ಮಾದಕ ವಸ್ತುಗಳನ್ನು ಬಳಸುವುದಿಲ್ಲ ಎಂದು ದೃಢ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿಚಾರಗಳಿಗೆ, ಓದುವ ಅಭ್ಯಾಸಕ್ಕೆ, ಉತ್ತಮ ಜೀವನದ ಕಡೆಗೆ ತಮ್ಮ ಗಮನ ಹರಿಸಬೇಕು, ಮಾದಕ ವಸ್ತುಗಳು ಮನುಷ್ಯನ ಬೆಳವಣಿಗೆಗೆ ಮಾರಕವಾಗುತ್ತವೆ, ಈ ವಿಚಾರವನ್ನು ವ್ಯಸನಿಗಳಿಗೆ ತಿಳಿಸಿ ಎಂದರು.

ಸ್ನೇಹ ಮನೋವಿಕಾಸ ಕೇಂದ್ರದ ಮನೋ ವೈದ್ಯಡಾ.ಲೋಕೇಶ್ ಬಾಬು, ವಿವಿಯ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಪ್ರೊ.ರಮೇಶ್.ಬಿ, ಮನೋವಿಜ್ಞಾನ ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಪರಶುರಾಮ್.ಕೆ.ಜಿ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರವೀಂದ್ರ ನಾಯ್ಕ್.ಕೆ., ಮನೋವೈದ್ಯಡಾ. ಪ್ರದೀಪ್, ಅಚರ್ಡ್ ಸಂಸ್ಥೆಯ ನಿರ್ದೇಶಕ ಡಾ.ಸದಾಶಿವಯ್ಯ, ಜಿಲ್ಲಾ ಮಲೇರಿಯಾ ನಿವಾರಣಾಧಿಕಾರಿ ಡಾ.ಚಂದ್ರಶೇಖರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!