ತುಮಕೂರು: ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಿದಲ್ಲಿ ಜನರು ಸರ್ಕಾರವನ್ನು ದೂರುವುದು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ತುರುವೇಕೆರೆ ಪಟ್ಟಣದ ಶ್ರೀಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ಪಂಚಾಯಿತಿ ಮಟ್ಟದ ಅಧಿಕಾರಿ, ಸಿಬ್ಬಂದಿ ಜನರಿಂದ ವಿವಿಧ ಸೌಲಭ್ಯ ಕೋರಿ ಸ್ವೀಕೃತ ಅರ್ಜಿಗಳು ಅರ್ಹವೇ? ಅನರ್ಹವೇ? ಎಂದು ಪರಿಶೀಲಿಸಿ 15 ದಿನಗಳೊಳಗಾಗಿ ವಿಲೇವಾರಿ ಮಾಡಬೇಕು, ಸ್ಥಳೀಯ ಅಧಿಕಾರಿಗಳು ನಿಗದಿತ ಸಮಯದೊಳಗೆ ವಿಲೇವಾರಿ ಮಾಡದೇ ಹೋದರೆ ಜನರು ಜಿಲ್ಲಾ ಕೇಂದ್ರಕ್ಕೆ ಬರುತ್ತಾರೆ, ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ದೂರದ ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಪಿಂಚಣಿ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸಿ
ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಮಂಜೂರಾತಿ ಆದೇಶವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಬೇಕು, ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ಒದಗಿಸಲು ಅಸಡ್ಡೆ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದರಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾರದಲ್ಲಿ 3 ದಿನ ಬೆಳಗ್ಗೆ 7 ರಿಂದ 10 ಗಂಟೆಯವರೆಗೂ ತಮ್ಮ ವ್ಯಾಪ್ತಿಯ ರೈತರ ಮನೆಗೆ ಹೋಗಿ ಆಂದೋಲನ ರೀತಿಯಲ್ಲಿ ಬಾಕಿಯಿರುವ ಪೌತಿ ಖಾತೆ, ಆರ್ ಟಿಸಿ ಇಂಧೀಕರಣ, ಪಹಣಿ, ನಿವೇಶನ ಸೌಲಭ್ಯ ಸೇರಿದಂತೆ ಕಂದಾಯ ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಶುದ್ಧ ಕುಡಿಯುವ ನೀರು ಪೂರೈಸಿ
ನಗರ ಪ್ರದೇಶ ಸೇರಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು, ಓವರ್ ಹೆಡ್ ಟ್ಯಾಂಕುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದರೊಂದಿಗೆ ಕುಡಿಯಲು ಯೋಗ್ಯವೇ ಎಂದು ಪರೀಕ್ಷೆಗೆ ಒಳಪಡಿಸಬೇಕು, ಜನರಿಗೆ ಕುಡಿಯಲು ಯೋಗ್ಯವಾದ ನೀರನ್ನೇ ಸರಬರಾಜು ಮಾಡಬೇಕು, ಈ ನಿಟ್ಟಿನಲ್ಲಿ ಪಂಚಾಯತಿ ಪ್ರತಿನಿಧಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ವಹಿಸಬೇಕು, ಪಂಚಾಯತಿ ಅಧಿಕಾರಿಗಳಿಗೆ ನೀರಿನ ಪರೀಕ್ಷೆ ಕಾರ್ಯವಿಧಾನದ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ನೇರವಾಗಿ ಜನರ ಬಳಿಗೆ ಬಂದು ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವುದೇ ಈ ಕಾರ್ಯಕ್ರಮದ ಉದ್ದೇಶ ಆಗಿರುವುದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಾಗ ಮಾತ್ರ ಜನ ಸ್ಪಂದನ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 172, ತಾಲ್ಲೂಕು ಪಂಚಾಯತಿ- 48, ಪಟ್ಟಣ ಪಂಚಾಯತಿ- 17, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- 1, ಸಮಾಜ ಕಲ್ಯಾಣ ಇಲಾಖೆ- 1, ಆರೋಗ್ಯ- 1, ಸಾರಿಗೆ ಇಲಾಖೆ- 1, ಲೋಕೋಪಯೋಗಿ ಇಲಾಖೆ- 3, ಭೂ ಮಾಪನ ಇಲಾಖೆ- 4, ಬೆಸ್ಕಾಂ- 5, ಹೇಮಾವತಿ- 1, ಅರಣ್ಯ ಇಲಾಖೆ- 1, ಭೂಸ್ವಾಧೀನ ಇಲಾಖೆ- 1 ಸೇರಿದಂತೆ ಒಟ್ಟು 256 ಅರ್ಜಿ ಸ್ವೀಕರಿಸಲಾಗಿದೆ.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕ ನಿರಂಜನ್, ರೇಷ್ಮೆ ಉಪ ನಿರ್ದೇಶಕ ಬಾಲಕೃಷ್ಣಪ್ಪ, ಕೃಷಿ ಉಪ ನಿರ್ದೇಶಕ ಅಶೋಕ್, ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಶಿವರಾಜಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಇತರರು ಇದ್ದರು.
Comments are closed.