ತುಮಕೂರು: ಗುಬ್ಬಿ ತಾಲೂಕಿನಲ್ಲಿ ದಾಖಲಾಗಿದ್ದ 11 ತಿಂಗಳ ಮಗು ಅಪಹರಣ ಪ್ರಕರಣದ ಬೆನ್ನತ್ತಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ಹುಳಿಯಾರಿನ ಮೆಹಬೂಬ್ ಶರೀಫ್ ತನ್ನ ಹೆಂಡತಿಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವುದಾಗಿ ತಿಳಿಸಿದ್ದು ಪ್ರಕರಣದ ಆರೋಪಿ ಶರೀಫ್ ನೀಡಿದ ಮಾಹಿತಿ ಆಧರಿಸಿ ಆರೋಪಿಗಳು ಮಾರಾಟ ಮಾಡಿದ್ದ ಒಂಬತ್ತು ಮಕ್ಕಳ ಪೈಕಿ ಐದು ಮಕ್ಕಳನ್ನು ರಕ್ಷಿಸಲಾಗಿದೆ, ಒಂದು ಮಗು ಮೃತಪಟ್ಟಿದ್ದು ಇನ್ನೊಂದು ಮಗುವನ್ನ ಪೋಷಕರಿಗೆ ಹಿಂದಿರುಗಿಸಿರುತ್ತಾರೆ, ಇದರ ಜೊತೆಗೆ ರಕ್ಷಿಸಿರುವ 5 ಮಕ್ಕಳ ಪೈಕಿ ಒಂದು ಮಗುವನ್ನು ಪೋಷಕರಿಗೆ ನೀಡಿದ್ದು ನಾಲ್ಕು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಬಳಸಲಾಗಿದ್ದ ಮಾರುತಿ 800 ಕಾರು 50 ಸಾವಿರ ನಗದು ಹಾಗೂ ನಾಲ್ಕು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ, ಪ್ರಕರಣದ ಪ್ರಮುಖ ಆರೋಪಿಗಳಾದ ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹೇಶ್, ಚಿಕ್ಕನಾಯಕನ ಹಳ್ಳಿ ತಾಲೂಕಿನ ಮೆಹಬೂಬ್ ಶರೀಫ್, ಗುಬ್ಬಿ ತಾಲೂಕಿನ ಬಿಕ್ಕೆ ಗುಡ್ಡದ ರಾಮಕೃಷ್ಣಪ್ಪ, ತುಮಕೂರಿನ ಭಾರತಿ ನಗರದ ಹನುಮಂತರಾಜು, ನಾಗಮಂಗಲ ತಾಲೂಕಿನ ಮುಬಾರಕ್ ಪಾಷ, ಮಧುಗಿರಿ ತಾಲೂಕಿನ ಬಡವನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೂರ್ಣಿಮಾ, ಶಿರಾ ಜ್ಯೋತಿ ನಗರದ ಖಾಸಗಿ ಆಸ್ಪತ್ರೆಯ ಸ್ಟಾಫ್ ನರ್ಸ್ ಸೌಜನ್ಯ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.
ಈ ಆರೋಪಿಗಳು ಅಂತರ್ ಜಿಲ್ಲಾ ಮಟ್ಟದಲ್ಲಿ ಮಕ್ಕಳನ್ನ ಮಾರಾಟ ಮಾಡುವ ಬೃಹತ್ ಜಾಲ ಹೊಂದಿದ್ದು ಅಪಹರಿಸಲಾದ
ಮಕ್ಕಳನ್ನು ಮೂರರಿಂದ ನಾಲ್ಕು ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ, ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯುವ ನಿಟ್ಟಿನಲ್ಲಿ ತನಿಖೆ ಚುರುಕು ಗೊಳಿಸಲಾಗಿದೆ ಎಂದು ಎಸ್ ಪಿ ಅಶೋಕ್ ತಿಳಿಸಿದರು.
ತನಿಖಾ ತಂಡದ ನೇತೃತ್ವ ವಹಿಸಿದ್ದ ಎಎಸ್ ಪಿಗಳಾದ ವಿ.ಮರಿಯಪ್ಪ ಮತ್ತು ಅಬ್ದುಲ್ ಖಾದರ್ ಹಾಗೂ ಶಿರಾ ಉಪ ವಿಭಾಗದ ಡಿವೈಎಸ್ಪಿ ಬಿ.ಕೆ.ಶೇಖರ್, ಗುಬ್ಬಿ ವೃತ್ತದ ಸಿಪಿಐ ಗೋಪಿನಾಥ್, ಗುಬ್ಬಿ ಪೊಲೀಸ್ ಠಾಣೆಯ ಪಿಎಸ್ ಐ ಸುನಿಲ್ ಕುಮಾರ್ ಸಿಬ್ಬಂದಿ ನವೀನ್ ಕುಮಾರ್, ವಿಜಯ್ ಕುಮಾರ್, ಮಧುಸೂದನ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು, ದುಶಾಂತ್ ಅವರ ಕಾರ್ಯಕ್ಕೆ ಎಸ್ ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments are closed.