ತುಮಕೂರು: ನಗರದ ಮಧುಗಿರಿ ರಸ್ತೆಯಲ್ಲಿರುವ ಕರ್ನಾಟಕ ಆಗ್ರೋ ಕೆಮಿಕಲ್ಸ್ ಘಟಕದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳಿಂದ ಜೂನ್ 26 ರಂದು ನಡೆದ ದಾಳಿಯಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ 1.23 ಲಕ್ಷ ರೂ. ಮೌಲ್ಯದ 11 ಟನ್ ರಸಗೊಬ್ಬರ ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ (ಜಾರಿದಳ-1) ಪುಟ್ಟರಂಗಪ್ಪ ತಿಳಿಸಿದ್ದಾರೆ.
ಪರವಾನಗಿ ಇಲ್ಲದೆ ಅನಧಿಕೃತವಾಗಿ ರಸಗೊಬ್ಬರ ಉತ್ಪಾದಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಕರ್ನಾಟಕ ಆಗ್ರೋ ಕೆಮಿಕಲ್ಸ್ ಘಟಕದಿಂದ 11 ಟನ್ ಲಘು ಪೋಷಕಾಂಶ ಮಿಶ್ರಣದ ಸಮೃದ್ಧಿ ರಸಗೊಬ್ಬರ ವಶಕ್ಕೆ ಪಡೆಯಲಾಗಿದೆ, ಈ ಹಿಂದೆ ಘಟಕ ಪರಿಶೀಲನೆ ನಡೆಸಲಾಗಿದ್ದು, ಲಘು ಪೋಷಕಾಂಶ ಮಿಶ್ರಣದ ರಸಗೊಬ್ಬರ ಉತ್ಪಾದನೆ, ಮಾರಾಟ ಪರವಾನಗಿ ಸೇರಿದಂತೆ ಇತರೆ ಅಗತ್ಯ ದಾಖಲೆ ಸಲ್ಲಿಸುವಂತೆ ಸೂಚಿಸಲಾಗಿತ್ತು, ದಾಖಲೆ ಸಲ್ಲಿಸದ ಕಾರಣಕ್ಕೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ರಸಗೊಬ್ಬರವನ್ನು ಜಪ್ತಿ ಮಾಡಲಾಗಿದೆ.
ದಾಳಿಯ ನೇತೃತ್ವನ್ನು ಬೆಂಗಳೂರಿನ ಉಪ ಕೃಷಿ ನಿರ್ದೇಶಕಿ (ಜಾಗೃತ ಕೋಶ) ಡಾ.ಅನೀಸ್ ಸಲ್ಮಾ.ಕೆ. ವಹಿಸಿಕೊಂಡಿದ್ದರು. ಸಹಾಯಕ ಕೃಷಿ ನಿರ್ದೇಶಕ (ಜಾಗೃತ ಕೋಶ) ರೇಣುಕಾ ಪ್ರಸನ್ನ, ತುಮಕೂರಿನ ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-2) ಅಶ್ವತ್ಥ ನಾರಾಯಣ ದಾಳಿಯಲ್ಲಿ ಪಾಲ್ಗೊಂಡಿದ್ದರು, ಸಹಾಯಕ ಕೃಷಿ ನಿರ್ದೇಶಕ (ಜಾರಿದಳ-1) ಪುಟ್ಟರಂಗಪ್ಪ ಅವರು ಜಪ್ತಿ ಕಾರ್ಯ ಕೈಗೊಂಡಿದ್ದರು.
Comments are closed.