ಸಿಎಂ ಸಿದ್ದರಾಮಯ್ಯ ರಾಜಿನಾಮೆ ಕೊಡ್ಲಿ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ- ಬಿಜೆಪಿ, ಜೆಡಿಎಸ್ ನಿಂದ ಪ್ರತಿಭಟನೆ

31

Get real time updates directly on you device, subscribe now.


ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
ಪರಿಶಿಷ್ಟ ಪಂಗಡ ಸಮಾಜದ ಅಭಿವೃದ್ಧಿಗೆ ಮೀಸಲಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಸಾಗಿದರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹನ ಮಾಡಿದರು, ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಿದರು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಚುನಾವಣೆಗಾಗಿ ವಾಲ್ಮೀಕಿ ನಿಗಮದ ಹಣವನ್ನು ಬೇನಾಮಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಬಳಕೆ ಮಾಡಿಕೊಳ್ಳಲಾಗಿದೆ, ಪ್ರಕರಣದಲ್ಲಿ ನಿಗಮದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು, ಜನರ ಕಣ್ಣೊರೆಸಲು ಎಸ್ ಐ ಟಿ ತನಿಖೆಗೆ ಒಪ್ಪಿಸಿ, ಸಚಿವ ನಾಗೇಂದ್ರ ಅವರ ರಾಜಿನಾಮೆ ಪಡೆಯಲಾಗಿದೆ, ಪ್ರಮುಖ ಆರೋಪಿಗಳನ್ನು ರಕ್ಷಣೆ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ಶಾಸಕ ಸುರೇಶ್ ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ, ಹಗರಣಗಳೇ ತುಂಬಿದ ಲೂಟಿ ಸರ್ಕಾರ, ಬಿಟ್ಟಿ ಭಾಗ್ಯದ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರ ಹಿತ ಬೇಕಾಗಿಲ್ಲ, ವಾಲ್ಮೀಕಿ ನಿಗಮದ ಹಗರಣದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಮ್ಮಕ್ಕೂ ಇದೆ, ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನ ತ್ಯಜಿಸಬೇಕು, ರಾಜ್ಯಪಾಲರು ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿಒದರು.

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣ ಲೂಟಿ ಮಾಡಲಾಗಿದೆ, ತೆಲಂಗಾಣ, ಆಂಧ್ರ ಪ್ರದೇಶದ ಚುನಾವಣೆಗೆ ಕಾಂಗ್ರೆಸ್ ನಾಯಕರು ನಮ್ಮ ಹಣವನ್ನು ನಕಲಿ ಬ್ಯಾಂಕ್ ಖಾತೆ ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ, ಇದೊಂದು ಅಕ್ಷಮ್ಯ ಅಪರಾಧ, ಹಗರಣದಲ್ಲಿ ದೋಚಿದ 187 ಕೋಟಿ ರೂ. ಪೈಕಿ ಕೇವಲ 6 ಕೋಟಿ ಮಾತ್ರ ವಾಪಸ್ ತಂದಿದ್ದಾರೆ, ಉಳಿದ ಹಣಕ್ಕೆ ಯಾರು ಹೊಣೆ? ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಎಸ್ ಟಿ ಘಟಕದ ರಾಜ್ಯ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ಗುಬ್ಬಿ ಜೆಡಿಎಸ್ ಮುಖಂಡ ನಾಗರಾಜು, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ವಕ್ತಾರ ಹೆಚ್.ಎನ್.ಚಂದ್ರಶೇಖರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರವೀಶಯ್ಯ, ಪ್ರಧಾನ ಕಾರ್ಯದರ್ಶಿ ಗಂಗರಾಜು, ಸಂದೀಪ್ ಗೌಡ, ಮುಖಂಡ ಎಸ್.ಪಿ.ಚಿದಾನಂದ್, ನಗರ ಅಧ್ಯಕ್ಷ ಟಿ.ಹೆಚ್.ಹನು ಮಂತರಾಜು, ಜೆಡಿಎಸ್ ನಗರ ಅಧ್ಯಕ್ಷ ವಿಜಯ್ ಗೌಡ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಯು.ಆರ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್, ದಯಾನಂದ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!