ಮಕ್ಕಳಿಗೆ ಅನುಭವಾತ್ಮಕ ಕಲಿಕೆ ಕಲಿಸಿ: ಜಿ.ಪ್ರಭು

40

Get real time updates directly on you device, subscribe now.


ತುಮಕೂರು: ಮಕ್ಕಳಿಗೆ ಕೇವಲ ಪಠ್ಯ ಪುಸ್ತಕಗಳಲ್ಲಿರುವ ವಿಷಯ ಭೋದಿಸಿ ಉತ್ತೀರ್ಣರಾಗುವಂತೆ ಮಾಡುವುದರ ಜೊತೆಗೆ ಅನುಭವಾತ್ಮಕ ಕಲಿಕೆಯ ಮೂಲಕ ಅವರ ಮುಂದಿನ ಭವಿಷ್ಯಕ್ಕೆ ಬೇಕಾದ ಅಂಶಗಳನ್ನೂ ಕಲಿಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಸಮೀಕ್ಷೆ ಮೂಲಕ ಮಾಹಿತಿ ಕಲೆ ಹಾಕಿದ್ದು, ಈ ಮಾಹಿತಿಯನ್ವಯ ಮೂಲಭೂತ ಸೌಕರ್ಯ ಕೊರತೆಯಿರುವ ಶಾಲೆಗಳಿಗೆ ಕ್ರಿಯಾತ್ಮಕ ಶೌಚಾಲಯ, ಸುಸಜ್ಜಿತ ಕೊಠಡಿ, ಆವರಣ ಗೋಡೆ, ವ್ಯವಸ್ಥಿತ ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಘಟಕ, ಡೆಸ್ಕ್ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯ ಒದಗಿಸುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಡಯಟ್ ಸಂಸ್ಥೆಯು ಶಿಕ್ಷಕರ ಕಾರ್ಯ ಕ್ಷಮತೆ ಹೆಚ್ಚಿಸಲು ಹಲವಾರು ಶೈಕ್ಷಣಿಕ ಕಾರ್ಯಕ್ರಮ ರೂಪಿಸಿದ್ದು, ವಿದ್ಯಾರ್ಥಿಗಳಿಗೂ ಸಹ ಮೌಲ್ಯಾಧಾರಿತ ಶಿಕ್ಷಣ ನೀಡಲು ಉದ್ದೇಶಿಸಿದೆ ಎಂದು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಒಟ್ಟುಗೂಡಿ ಕೆಲಸ ಮಾಡಬೇಕು, ವ್ಯವಸ್ಥಿತ ಶಿಕ್ಷಣ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಿ ಜನರು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದರು.

ಈ ಬಾರಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಸರ್ಕಾರಿ ಶಾಲೆಗಳಲ್ಲಿ ಶೇಕಡಾ 68.60 ಹಾಗೂ ಅನುದಾನಿತ ಶಾಲೆಗಳಲ್ಲಿ ಶೇಕಡಾ 40ರಷ್ಟು ಫಲಿತಾಂಶ ಬಂದಿದ್ದು, ಅನುದಾನಿತ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿಂದೆ ಉಳಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ, ಅನುದಾನಿತ ಶಾಲೆಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇಲಾಖೆಗೆ ಗೌರವ ತರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜೇರಿ, ತುಮಕೂರು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಮಂಜುನಾಥ್, ಮಧುಗಿರಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!