ಕುಣಿಗಲ್: ಗೊಂದಲ, ಗದ್ದಲ, ವಾಗ್ವಾದ ನಡುವೆ ಪುರಸಭೆಯು ಬಸ್ ನಿಲ್ದಾಣ, ಸುಲಭ ಶೌಚಾಲಯದ ಸುಂಕ ಹರಾಜು ಬಾಬ್ತನ್ನು ಒಂಬತ್ತು ತಿಂಗಳಿಗೆ ಪೊಲೀಸರ ಬಂದೋಬಸ್ತ್ ನಲ್ಲಿ ಶನಿವಾರ ನಡೆಸಲಾಯಿತು.
ಪುರಸಭೆ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಮಂಜುಳಾ ನೇತೃತ್ವದಲ್ಲಿ ಪುರಸಭೆಗೆ ಸೇರಿದ ಬಸ್ ನಿಲ್ದಾಣ, ಸುಲಭ ಶೌಚಾಲಯ ಹಾಗೂ ಸಂತೇ ಮೈದಾನ ನೆಲವಳಿ ಸುಂಕದ ಬಾಬ್ತನ್ನು ಹರಾಜು ಮೂಲಕ 9 ತಿಂಗಳ ಅವಧಿಗೆ ನೀಡಲು ಶನಿವಾರ ಹರಾಜು ಪ್ರಕ್ರಿಯೆ ಆರಂಭಿಸಲಾಯಿತು, ಸಭೆಯ ಆರಂಭಕ್ಕೆ ಪುರಸಭೆ ಮಾಜಿ ಸದಸ್ಯ ಗೋಪಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೆಲ ಅಂಗಡಿಯವರು ಪುರಸಭೆ ಜಾಗದಲ್ಲಿ ಬೀದಿಬದಿಯ ವ್ಯಾಪಾರಿಗೆ ಜಾಗ ಕೊಟ್ಟು ಅಕ್ರಮವಾಗಿ ಹಣ ವಸೂಲು ಮಾಡುತ್ತಿದ್ದು ಇದರಿಂದ ಪುರಸಭೆ ಬರಬೇಕಾದ ಲಕ್ಷಾಂತರ ರೂ. ಆರ್ಥಿಕ ರಾಜಸ್ವ ಕೊರತೆಯಾಗುತ್ತಿದೆ, ಇದನ್ನು ನಿಯಂತ್ರಿಸಬೇಕು, ಈ ಬಗ್ಗೆ ಹಲವು ದೂರು ನೀಡಿದರೂ ಕ್ರಮವಾಗಿಲ್ಲ ಎಂದು ಹರಾಜಿಗೆ ಅಡ್ಡಿ ಪಡಿಸಿದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮುಖ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಸ್ಪಷ್ಟ ದೂರು ನೀಡಿದರೆ ಕ್ರಮ ಜರುಗಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈಬಿಟ್ಟರು, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಧನಂಜಯ, ಪುರಸಭೆಯು ಬಸ್ನಿಲ್ದಾಣ, ಸಂತೆ ಮೈದಾನದಲ್ಲಿ ಸುಂಕ ವಸೂಲು ಮಾಡುವಾಗ ನೋಂದಾಯಿತ ಬೀದಿಬದಿ ವ್ಯಾಪಾರಿಗಳಿಗೆ ವಿನಾಯಿತಿ ನೀಡಿ, ತೆರಿಗೆ ವಸೂಲು ಮಾಡಬಾರದು ಎಂದು ಪಟ್ಟು ಹಿಡಿದರು, ಈ ವೇಳೆ ಮುವತ್ತಕ್ಕು ಹೆಚ್ಚು ಬೀದಿಬದಿ ವ್ಯಾಪಾರಿಗಳು ಬೆಂಬಲಿಸಿ ವಾಗ್ವಾದ ನಡೆಸಿದರು.
ಕಂದಾಯ ನಿರೀಕ್ಷಕ ಮುನಿಯಪ್ಪ, ಪರಿಸರ ಅಭಿಯಂತರ ಚಂದ್ರಶೇಖರ್, ಪುರಸಭೆ ಸದಸ್ಯ ಶ್ರೀನಿವಾಸ, ದೇವರಾಜ್ ಸಮಾಧಾನ ಮಾಡಲು ಯತ್ನಿಸಿದರೂ ಬಗ್ಗದೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು.
ಮುಖ್ಯಾಧಿಕಾರಿ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿ, ಬಸ್ ನಿಲ್ದಾಣ, ಸುಲಭ ಶೌಚಾಲಯ ಹರಾಜು ಬಾಬ್ತು ಪೂರ್ಣಗೊಳಿಸಿ ಸಂತೇ ಮೈದಾನದ ನೆಲವಳಿ ಸುಂಕ ವಸೂಲಿ ವಿಷಯದಲ್ಲಿ ಇನ್ನರೆಡು ದಿನದೊಳಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸುಲಭ ಶೌಚಾಲಯ ಹರಾಜು ಪ್ರಕ್ರಿಯೆ ವೇಳೆ ಈ ಹಿಂದೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ನಮಗೆ ಗುತ್ತಿಗೆ ನೀಡುವಾಗ ಹಣ ಕಟ್ಟಿಸಿಕೊಳ್ಳುವಾಗ ನೀಡಿದ ಕರಾರಿನಂತೆ ನಡೆದುಕೊಂಡಿಲ್ಲ, ಆರ್ ಎಂಸಿ, ಶಿಕ್ಷಕರ ಭವನದ ಸಮೀಪದ ಶೌಚಾಲಯ ವಶಕ್ಕೆ ನೀಡದೆ ಪೂರ್ತಾ ಹಣ ಪಡೆದಿದ್ದು ಅನ್ಯಾಯವಾಗಿದ್ದು ತಮ್ಮನ್ನೆ ಈ ಬಾರಿ ಪರಿಗಣಿಸುವಂತೆ, ಇಲ್ಲವಾದಲ್ಲಿ ಕಟ್ಟಿರುವ ಹಣ ನೀಡುವಂತೆ ಪಟ್ಟು ಹಿಡಿದು ವಾಗ್ವಾದ ನಡೆಸಿದರು, ಪೊಲೀಸರು ಮಧ್ಯ ಪ್ರವೇಶಿಸಿ ಅಗತ್ಯ ಮನವಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ಸೂಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಪುರಸಭೆ ಮಾಜಿ ಸದಸ್ಯ ಶ್ರೀಕಂಠಯ್ಯ, ಸಂತೇ ಮೈದಾನ ರಸ್ತೆ, ಇತರೆ ರಸ್ತೆ ಒತ್ತುವರಿಯಿಂದ ತುಂಬಿದೆ, ಎಲ್ಲೆಂದರಲ್ಲಿ ಪೆಟ್ಟಿಗೆ ಅಂಗಡಿ ಇಡಲಾಗುತ್ತಿದೆ, ಪುರಸಭೆ ಇದೆಯೋ ಸತ್ತು ಹೋಗಿದೆಯೂ ಮುಖ್ಯರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ, ರಸ್ತೆ, ಫುಟ್ ಪಾತ್ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿದರು, ಸುಲಭ ಶೌಚಾಲಯ 6.60 ಲಕ್ಷ ಕ್ಕೂ, ಬಸ್ ನಿಲ್ದಾಣದ ಸುಂಕ ವಸೂಲಿ 5.10 ಲಕ್ಷಕ್ಕೆ ಹರಾಜಾಯಿತು.
Comments are closed.