ಕುಣಿಗಲ್: ಪಟ್ಟಣದಲ್ಲಿ ಜ್ವರ ಪ್ರಕರಣ ಹೆಚ್ಚಾಗುತ್ತಿದ್ದು ಖಾಸಗಿ ಕ್ಲಿನಿಕ್ ಮತ್ತು ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯ ಇಲಾಖೆ ನಡುವೆ ಸಂವಹನದ ಕೊರತೆಯಿಂದಾಗಿ ಜ್ವರ ನಿಯಂತ್ರಣ ಕ್ರಮ ಕೈಗೊಳ್ಳಲು ಇಲಾಖೆಗಳು ವಿಫಲವಾದ ಕಾರಣ ಜ್ವರ ಪ್ರಕರಣ ಗಳು ಹೆಚ್ಚಿದ್ದು ನಾಗರಿಕರು ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಪರದಾಡುವಂತಾಗಿದೆ.
ಕಳೆದ ಕೆಲದಿನಗಳಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳಿಗೆ ಜ್ವರದಿಂದ ಬಳಲುತ್ತಿರುವ ಯಾವುದೇ ವಯೋಮಿತಿ ಇಲ್ಲದ ನಾಗರಿಕರು ಚಿಕಿತ್ಸೆಗೆ ಎಡತಾಕುತ್ತಿದ್ದಾರೆ, ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಪೈಕಿ ಜ್ವರದಿಂದ ಬಳಲುವವರೆ ಕಳೆದೊಂದು ವಾರದಿಂದ ಹೆಚ್ಚಾಗಿದ್ದಾರೆ ಎಂದು ಮೂಲಗಳು ಹೇಳುತ್ತಿದ್ದರೆ, ಸಾರ್ವಜನಿಕ ಆಸ್ಪತ್ರೆಗಿಂತ ಖಾಸಗಿ ಕ್ಲಿನಿಕ್, ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಸಂಖ್ಯೆ ಹೆಚ್ಚಾಗಿದೆ, ಖಾಸಗಿ ಕ್ಲಿನಿಕ್ ಗಳಲ್ಲು ಇಪ್ಪತ್ತರಿಂದ ಮೂವತ್ತು ಜ್ವರ ಪ್ರಕರಣಗಳ ರಕ್ತ ಪರಿಕ್ಷೆ ಮಾಡಿದಲ್ಲಿ ಕನಿಷ್ಟ ಆರರಿಂದ ಎಂಟು ಡೆಂ ಎಂದು ಕಿಟ್ ಪರೀಕ್ಷೆಯಲ್ಲಿ ಧೃಡಪಡುತ್ತಿದ್ದು ಖಾಸಗಿ ವೈದ್ಯರ ಬಳಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಜ್ವರ ಕಡಿಮೆಯಾಗದೆ ಇದ್ದಲ್ಲಿ ಅಂತಹವರ ರಕ್ತ ಪರೀಕ್ಷೆ ತುಮಕೂರಿಗೆ ಕಳಿಸುತ್ತಿದ್ದು ವರದಿಗೆ ಮೂರ್ನಾಲ್ಕು ದಿನ ಕಾಯುವ ಸ್ಥಿತಿ ಇದೆ.
ರೋಗಿಗಳು ವರದಿಗೆ ಕಾಯದೆ ಚಿಕಿತ್ಸೆಗೆ ಮೊರೆ ಹೋಗುವಂತಾಗಿದೆ, ಪಟ್ಟಣದಲ್ಲಿ ಸೊಳ್ಳೆ ಕಾಟ ಹೆಚ್ಚಿರುವುದರಿಂದಲೂ ಜ್ವರ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದ್ದು ಪುರಸಭೆ ನೆಪಮಾತ್ರಕ್ಕೆ ಎರಡುದಿನ ಫಾಗಿಂಗ್ ಮಾಡಿದ್ದು ನಂತರ ಸುಮ್ಮನಾಗಿದೆ, ಇನ್ನು ವೈದ್ಯರ ಪ್ರಕಾರ ಕಲುಷಿತ ನೀರು ಕುಡಿದರೂ ಜ್ವರ ಬರುತ್ತಿದ್ದು ಈ ಬಗ್ಗೆ ಅಗತ್ಯ ತಪಾಸಣೆ ನಂತರ ತಿಳಿಯಲಿದೆ ಎನ್ನುತ್ತಾರೆ. ಸಾಮಾನ್ಯವಾಗಿ ಕಾಡುವ ಜ್ವರವೂ ಮೂರು ದಿನಗಳ ವರೆಗೂ ಬಾದಿಸುತ್ತಿದ್ದು, ಇದರಿಂದ ರೋಗಿಗಳು, ಮನೆಯವರು ಆತಂಕಕ್ಕೆ ಒಳಗಾಗುತ್ತಿದ್ದು ಜ್ವರವು ವೈರಾಣುವೆ ಅಥವಾ ಬೇರೆಯದೆ ಎಂದು ಪರೀಕ್ಷೆ ಮಾಡಿಸಿ ಕಾಯುವ ತಾಳ್ಮೆ ಇಲ್ಲದೆ ನೇರವಾಗಿ ಆ್ಯಂಟಿಬಯೋಟಿಕ್ ಚಿಕಿತ್ಸೆಗೆ ಬಹುತೇಕರು ಖಾಸಗಿಯಾಗಿ ಚಿಕಿತ್ಸೆ ಪಡೆಯುವ ಕಾರಣ ಸಹಜವಾಗಿ ಚಿಕಿತ್ಸೆ ವೆಚ್ಚ ಹೆಚ್ಚಾಗುತ್ತಿದೆ. ಒಂದೆಡೆ ಮೂರ್ನಾಲ್ಕು ದಿನ ಕೆಲಸಕ್ಕೆ ಹೋಗಲಾರದೆ ಇತ್ತ ಹಣವೂ ಖರ್ಚಾಗುವಂತಾಗಿದ್ದು ಮನೆಯವರು ಹೈರಾಣಾಗುವಂತಾಗಿದೆ, ಖಾಸಗಿಯವರು, ಸರ್ಕಾರಿ ಅಸ್ಪತ್ರೆಯವರ ನಡುವಿನ ಹೊಂದಾಣಿಕೆ ಕೊರತೆಯಿಂದ ಬಡ, ಅಮಾಯಕ ನಾಗರಿಕರು ಅನಾರೋಗ್ಯದ ನಡುವೆ ಪರದಾಡುವಂತಾಗಿದ್ದು ಯಾವುದೇ ಪ್ರಾಣ ಹಾನಿಯಾಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತು ನಾಗರಿಕರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿದೆ.
Comments are closed.