ಕುಣಿಗಲ್ ಪುರಸಭೆ ಸದಸ್ಯರ ಬಾಕಿ ಅವಧಿ ಎಷ್ಟು?

ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾದ ಪ್ರಶ್ನೆ

37

Get real time updates directly on you device, subscribe now.


ಕುಣಿಗಲ್: ಪುರಸಭೆ ಸದಸ್ಯರ ಆಡಳಿತಾವಧಿಯ ಬಾಕಿ ತಿಂಗಳು ಎಷ್ಟು ಎಂಬ ವಿಷಯ ಪುರಸಭೆ ಸದಸ್ಯರು ಸೇರಿದಂತೆ ನಾಗರಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣದ 23ಪುರಸಭೆ ಸದಸ್ಯರ ಸಾರ್ವತ್ರಿಕ ಚುನಾವಣೆಯು 2019ರ ಮೇ 29 ರಂದು, 31 ರಂದು ಫಲಿತಾಂಶ ಪ್ರಕಟಗೊಂಡು ಪುರಸಭೆ ಸದಸ್ಯರ ಆಯ್ಕೆ ಘೊಷಣೆಯಾದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ನೆನೆಗುದಿಗೆ ಬಿದ್ದ ಕಾರಣ ಸದಸ್ಯರಾಗಿ ಆಯ್ಕೆಯಾದರೂ ಪುರಸಭೆಯಲ್ಲಿ ಅಧಿಕಾರ ಚಲಾಯಿಸದೆ ಸದಸ್ಯರು ಹೆಸರಿಗಷ್ಟೆ ಎಂಬತಾಗಿತ್ತು, ಸದಸ್ಯರ ಚುನಾವಣೆ ಮುಗಿದು 16- 17 ತಿಂಗಳ ಅವಧಿ ಕಳೆದ ನಂತರ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಮಾಡಿದ ಮೇರೆಗೆ ಈ ಸ್ಥಾನಗಳಿಗೆ 2020ರ ನವೆಂಬರ್ 11 ರಂದು ಚುನಾವಣೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಯಿತು, ಅಧ್ಯಕ್ಷರ ಆಯ್ಕೆ ನಂತರ 2020ರ ಡಿಸೆಂಬರ್ 12 ರಂದು ಪುರಸಭೆ ಸದಸ್ಯರ ಮೊದಲ ಸಾಮಾನ್ಯ ಸಭೆ ನಡೆಯಿತು, 30 ತಿಂಗಳ ನಂತರ ಮೀಸಲಾತಿ ಪುನರ್ ರಚನೆ ಪ್ರಕ್ರಿಯೆ ರಾಜ್ಯ ಸರ್ಕಾರದ ಹಂತದಲ್ಲಿ ನೆನೆಗುದಿಗೆ ಬಿದ್ದ ಕಾರಣ 2023ರ ಮೇ ಮಾಹೆಯ 6 ರಂದು ತುಮಕೂರು ಉಪ ವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತು.

ಮೇ 2019ರಲ್ಲಿ ಪುರಸಭೆ ಸದಸ್ಯರ ಸಾರ್ವತ್ರಿಕ ಚುನಾವಣೆ ನಡೆದು ಐದು ವರ್ಷ ಕಳೆದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯರಾಗಲು ಆಸಕ್ತಿ ಇರುವವರು, ಹಾಲಿ ಪುರಸಭೆ ಸದಸ್ಯರು ತಮ್ಮ ಅಧಿಕಾರವಧಿ ಎಷ್ಟು ಎಂದು ತಮ್ಮೊಳಗೆ ಚರ್ಚೆ ಮಾಡಿಕೊಳ್ಳುವಂತೆ ಆಗಿದ್ದು ಸದರಿ ವಿಷಯವು ಪಟ್ಟಣದ ಚಹಾ, ಹೋಟೆಲ್, ಹರಟೆ ಕಟ್ಟೆಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪುರಸಭೆ ಸದಸ್ಯರ ಪದಾವಧಿಯ ಬಗ್ಗೆ ಕರ್ನಾಟಕ ಪುರಸಭೆ ಅಧಿನಿಯಮ 1964ರ ಸೆಕ್ಷನ್ 18 ರಲ್ಲಿ ವಿವರಿಸಲಾಗಿದೆ, ಈ ಬಗ್ಗೆ ಕೆಲ ಹಾಲಿ ಸದಸ್ಯರು ಪೌರಾಡಳಿತ ಸಚಿವರನ್ನು ಅಭಿವೃದ್ಧಿ ವಿಷಯಕ್ಕೆ ಭೇಟಿ ಮಾಡಿದಾಗ ಅಧಿಕಾರವಧಿಯ ಬಗ್ಗೆ ಪ್ರಸ್ತಾಪಿಸಿದಾಗ ಮೊದಲ ಸಭೆಯಿಂದ ಐದು ವರ್ಷ ಅಧಿಕಾರವಧಿ ಎಂದಿದ್ದಾರೆಂದು ಹೇಳಲಾಗಿದೆ.
ಹಾಲಿ ಪುರಸಭೆಯ ಹಿರಿಯ ಸದಸ್ಯ ಸ್ವಾಮಿ ಹೇಳುವಂತೆ ನಮಗೆ ಚುನಾವಣೆ ನಡೆದು 61 ತಿಂಗಳಾದರೂ ಅಧಿಕಾರ ನಡೆಸಿರುವುದು ಅಧ್ಯಕ್ಷರ ಅವಧಿ 30 ತಿಂಗಳು ಮಾತ್ರ, ಪುನಹ ಅಧ್ಯಕ್ಷ ಗಾದಿಯ ಮೀಸಲು ಜಾರಿಗೊಂಡು ಅದು ಘೋಷಣೆಯಾದ 30 ತಿಂಗಳ ಅಧಿಕಾರ ಅವಧಿ ಇದೆ ಎಂಬ ವಾದ ಮಂಡಿಸುತ್ತಾರೆ.

ಪುರಸಭೆ ಮಾಜಿ ಅಧ್ಯಕ್ಷರಾಗಿರುವ ಕೆ.ಎಲ್.ಹರೀಶ್, ಪುರಸಭೆ ನಿಯಮಾವಳಿಗಳ ಪ್ರಕಾರ ಸದಸ್ಯರ ಆಡಳಿತ ಮಂಡಳಿಯು ಅಧ್ಯಕ್ಷರ ನೇತೃತ್ವದಲ್ಲಿ ನಡೆಸಿದ ಮೊದಲ ಸಭೆಯ ದಿನಾಂಕದಿಂದ ಮುಂದಿನ ಐದು ವರ್ಷ ಅಂದರೆ 60 ತಿಂಗಳು ಅಧಿಕಾರ ಅಷ್ಟೆ ಎನ್ನುತ್ತಾರೆ.
ಈ ಬಗ್ಗೆ ಅವಲೋಕಿಸಿದರೆ ಪ್ರಸಕ್ತ ಪುರಸಭೆಯ ಮೊದಲ ಸಭೆಯು ಡಿಸೆಂಬರ್ 16, 2020 ರಂದು ನಡೆದಿದ್ದು ಅಂದಿನಿಂದ ಲೆಕ್ಕ ಹಾಕಿದರೆ 16 ಡಿಸೆಂಬರ್ 2025 ಕ್ಕೆ ಅಧಿಕಾರ ಕೊನೆಗೊಳ್ಳುತ್ತದೆ ಅಂದರೆ, ಹಾಲಿ ಪುರಸಭೆ ಸದಸ್ಯರ ಅಧಿಕಾರವಧಿಯು ಇನ್ನು 16 ತಿಂಗಳು ಬಾಕಿ ಮಾತ್ರ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಪುರಸಭೆಗೆ ಜನಪ್ರತಿನಿಧಿಗಳ ಆಡಳಿತ ಇದ್ದೂ ಇಲ್ಲದ ಸ್ಥಿತಿಯಾಗಿದ್ದು ಬಾಕಿ ಉಳಿದ ಅವಧಿಗೆ ಸರ್ಕಾರ ಮೀಸಲಾತಿ ಬೇಗನೆ ಘೋಷಿಸಿ ಜನಪ್ರತಿನಿಧಿಗಳ ಆಡಳಿತ ಜಾರಿಗೊಳಿಸಬೇಕೆಂಬ ಆಶಯ ಎಲ್ಲಾ ಪುರಸಭೆ ಸದಸ್ಯರದ್ದಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಎರಡನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಯಾವಾಗ ಘೋಷಿಸುತ್ತದೆ ಎಂದು ಕಾದು ನೋಡಬೇಕಿರುವ ಜೊತೆಯಲ್ಲಿ ಮೀಸಲಾತಿ ಘೋಷಣೆಯ ಪತ್ರದಲ್ಲೆ ಬಾಕಿ ಉಳಿಕೆ ಅವಧಿ ಸ್ಪಷ್ಟವಾಗುವುದರಿಂದ ಎಲ್ಲಾ ಚರ್ಚೆಗೂ ಉತ್ತರ ಸಿಗಲಿದೆ ಎನ್ನಲಾಗುತ್ತಿದೆ.

Get real time updates directly on you device, subscribe now.

Comments are closed.

error: Content is protected !!