ಜನರಿಗೆ ಸಮಗ್ರ ವಚನ ಸಾಹಿತ್ಯ ತಿಳಿಸಿದ್ದು ಹಳಕಟ್ಟಿ

ಫ.ಗು.ಹಳಕಟ್ಟಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ: ಕೆ.ಎಸ್.ಸಿದ್ದಲಿಂಗಪ್ಪ

42

Get real time updates directly on you device, subscribe now.


ತುಮಕೂರು: ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ, ಯುವ ಜನರಿಗೆ ತಿಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವಚನ ಸಾಹಿತ್ಯ ಸಂರಕ್ಷಣಾ ದಿನವನ್ನು ಸಾಹಿತ್ಯ ಪರಿಷತ್ತು ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶಾಲಾ, ಕಾಲೇಜುಗಳಲ್ಲಿ ಆಚರಿಸಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾ ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ಅಖಿಲ ಭಾರತ ವೀರಶೈವ ಮಹಾ ಸಭಾ, ತುಮಕೂರು ನಗರ ವೀರಶೈವ ಸೇವಾ ಸಮಾಜ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರ ತುಮಕೂರು ವತಿಯಿಂದ ಹಮ್ಮಿಕೊಂಡಿದ್ದ ವಚನ ಪಿತಾಮಹ ಫಕೀರಪ್ಪ ಗುರುವಪ್ಪ ಹಳಕಟ್ಟಿ ಅವರ ಜನ್ಮ ದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡತನವನ್ನೇ ಬಂಡವಾಳ ಮಾಡಿಕೊಂಡು, ಹರಿದು ಹಂಚಿ ಹೋಗಿದ್ದ ವಚನದ ತಾಳೆಗರಿಗಳನ್ನು ಒಗ್ಗೂಡಿಸಿ, ಸಮಗ್ರ ವಚನ ಸಾಹಿತ್ಯವನ್ನು ಜನರಿಗೆ ನೀಡಿದ ಫ.ಗು.ಹಳಕಟ್ಟಿಯವರ ಪರಿಶ್ರಮ ಯುವ ಜನತೆಗೆ ತಿಳಿಯಬೇಕಿದೆ ಎಂದರು.

ವಕೀಲರಾಗಿ, ಸಹಕಾರಿ ಧುರೀಣರಾಗಿ, ಶಿಕ್ಷಣ ತಜ್ಞರಾಗಿ ಬಹುಮುಖ ಪ್ರತಿಭೆ ಹೊಂದಿದ್ದ ಫ.ಗು ಹಳಕಟ್ಟಿ ಅವರು ವಚನ ಸಾಹಿತ್ಯದ ಸಂಗ್ರಹಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟವರು, ಇದ್ದ ಮನೆಯನ್ನು ಮಾರಿ ವಚನ ಶಾಸ್ತ್ರ ಸಾರ ಪುಸ್ತಕ ಮುದ್ರಿಸಲು ಮುದ್ರಣ ಯಂತ್ರ ಖರೀದಿಸಿ, ಜೀವಿತದ ಕೊನೆಯವರೆಗೂ ಬಡವರಾಗಿಯೇ ಬದುಕಿ, ವಚನ ಸಾಹಿತ್ಯ ಶ್ರೀಮಂತಗೊಳಿಸಿದ ವ್ಯಕ್ತಿ ಫ.ಗು.ಹಳಕಟ್ಟಿರವರು ಎಂದು ಕೆ.ಎಸ್.ಸಿದ್ದಲಿಂಗಪ್ಪ ಪ್ರಶಂಸಿದರು.
ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಸಂಶೋಧಕ ಡಾ.ನಂಜುಂಡ ಸ್ವಾಮಿ, ವಕೀಲರಾಗಿ ಕೆಲಸ ಮಾಡಿ ಸಾವಿರಾರು ರೂ ಗಳಿಸಬಹುದಾಗಿದ್ದ ಫ.ಗು.ಹಳಕಟ್ಟಿ ಅವರು ವಕೀಲ ವೃತ್ತಿ ಬಿಟ್ಟು, ವಚನ ಸಾಹಿತ್ಯ ಸಂಗ್ರಹದಲ್ಲಿ ತೊಡಗಿದವರು, ಇವರು ತಮಲ್ಲಿ ಸಂಗ್ರಹವಾಗಿದ್ದ ಸುಮಾರು 958 ವಚನಗಳನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿ, ಮೊದಲು ಮುದ್ರಣಕ್ಕೆ ವ್ಯವಸ್ಥೆ ಮಾಡಿದರು, 1923 ರಲ್ಲಿ ಬೆಳಗಾವಿಯ ಮಹಾವೀರ ಪ್ರಿಂಟರ್ಸ್ ನಲ್ಲಿ ವಚನಶಾಸ್ತ್ರ ಸಾರ ಎಂಬ ಪುಸ್ತಕ ಹೊರತಂದರು, ಇಂದಿಗೆ ನೂರು ವರ್ಷ ತುಂಬಿದೆ, ಹಾನಗಲ್ ಕುಮಾರಸ್ವಾಮಿಗಳ ಸಹಕಾರದಿಂದ ಈ ಪುಸ್ತಕ ಮುದ್ರಣಗೊಂಡು, ಹೊರ ಜಗತ್ತಿಗೆ ಹೆಚ್ಚಿನ ಮಟ್ಟದಲ್ಲಿ ವಚನಕಾರರ ಪರಿಚಯವಾಗಲು ಸಾಧ್ಯವಾಯಿತು ಎಂದರು.

ಕುಣಿಗಲ್ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಗೋವಿಂದರಾಯ ಮಾತನಾಡಿ, ವಚನ ಸಾಹಿತ್ಯ ಸಂಗ್ರಹಕ್ಕಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದ ಫ.ಗು.ಹಳಕಟ್ಟಿಯವರು ಅವರ ಸೇವೆ ಮತ್ತು ತ್ಯಾಗ ಇಂದಿನ ಪೀಳಿಗೆಗೆ ಮಾದರಿ ಎಂದರು.

ಅಮೃತ ವೀರಭದ್ರಯ್ಯ, ಎಂ.ಜಿ.ಸಿದ್ದರಾಮಯ್ಯ, ಸಾಹಿತಿಗಳಾದ ಉಮಾಮಹೇಶ್, ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಸುರೇಶ್ ಕುಮಾರ್, ಚಿಕ್ಕಬೆಳ್ಳಾವಿ ಶಿವಕುಮಾರ್, ರುದ್ರಮೂರ್ತಿ ಎಲೆರಾಮಪುರ, ನಟರಾಜು, ವಿಶ್ವೇಶ್ವರಯ್ಯ, ಶಶಿಕುಮಾರ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!