ಕುಣಿಗಲ್: ತಾಲೂಕಿನ ನೀರಾವರಿ ಪ್ರಮುಖ ಕೊಂಡಿಯಾದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು, ರೈತರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.
ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಆವರಣದಿ ಸಭೆ ನಡೆಸಿದರು, ಸಭೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಹೇಮಾವತಿ ಜಲಾಶಯವನ್ನ ಜಿಲ್ಲೆಯ ಶಾಸಕರುಗಳಾಗಲಿ, ಮಾಜಿ ಶಾಸಕರುಗಳಾಗಲಿ ನಿರ್ಮಾಣ ಮಾಡಿಲ್ಲ, ನಮ್ಮ ನೀರು ನಮ್ಮ ಹಕ್ಕು, ನಮಗೆ ಬರುವ ನೀರನ್ನು ತಡೆಯಲು ಇವರ್ಯಾರು, ಹಾಸನ ಜಿಲ್ಲೆಯವರು ತುಮಕೂರು ಜಿಲ್ಲೆಗೆ ನೀರನ್ನ ಬಿಡುವುದಿಲ್ಲ ಎಂದರೆ ಸುಮ್ಮನೆ ಕೂರಲು ಸಾಧ್ಯವೇ, ಅದೇ ರೀತಿ ತಾಲ್ಲೂಕಿಗೆ ನೀರು ಬಿಡುವುದಿಲ್ಲ, ಕಾಮಗಾರಿಗೆ ಅಡ್ಡಿಪಡಿಸುತ್ತೇವೆ ಎಂದರೆ ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ, ಲಿಂಕ್ ಕೆನಾಲ್ ಕಾಮಗಾರಿಗೆ ಅಡ್ಡಿ ಪಡಿಸುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿಗೆ ಅಡ್ಡಿ ಪಡಿಸುವವರ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿ ಸುಗಮವಾಗಿ ಸಾಗಲು ಪೊಲೀಸ್ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಮಾತನಾಡಿ, ತಾಲ್ಲೂಕಿನ ಪಾಲಿನ ನೀರನ್ನು ನಾವು ಕೇಳುತ್ತಿದ್ದು, ಬೇರೆ ತಾಲೂಕಿನವರ ಪಾಲನ್ನು ನಾವು ಕೇಳುತ್ತಿಲ್ಲ, ಬೇರೆ ತಾಲ್ಲೂಕಿನ ಕೆಲ ಮುಖಂಡರು ಅಡ್ಡಿಪಡಿಸೋದು ಸರಿಯಲ್ಲ, ತಾಲ್ಲೂಕಿನಲ್ಲಿ ಸಾವಿರ ಅಡಿ ಬೋರ್ ವೆಲ್ ಕೊರೆದರು ಕುಡಿಯಲು ನೀರು ಸಿಗುತ್ತಿಲ್ಲ, ನಮಗೆ ಕುಡಿಯಲು ನೀರು ಬೇಡವೇ, ಕಾಮಗಾರಿ ವಿರೋಧಿಸುವ ಮುಖಂಡರು ಅಡ್ಡಿ ಪಡಿಸದೆ ಸಹಕಾರ ನೀಡಬೇಕಿದೆ, ನೀರಿನ ವಿಷಯಕ್ಕೆ ರಾಜಕಾರಣ ಬೆರೆಸಿ ಲಿಂಕ್ ಕೆನಾಲ್ ಕಾಮಗಾರಿಗೆ ಅಡ್ಡಿ ಪಡಿಸಬೇಡಿ ಎಂದು ಮನವಿ ಮಾಡಿ, ಜಿಲ್ಲೆಗೆ ಹೇಮಾವತಿ ನೀರು ಹರಿಸಲು ತಾಲ್ಲೋಕಿನ ಜನಪ್ರತಿನಿಧಿಗಳ ಶ್ರಮ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ತಾಲ್ಲೂಕಿನ ಜನರ ತಾಳ್ಮೆ ಕೆಡಿಸಬೇಡಿ ಎಂದು ಎಚ್ಚರಿಸಿದರು.
ತಹಶೀಲ್ದಾರ್ ವಿಶ್ವನಾಥ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರೆಹಮಾನ್ ಷರೀಫ್, ನಾಗೇಂದ್ರ, ಶ್ರೀನಿವಾಸ್ ,ಜಯಲಕ್ಷ್ಮಿ, ಬೇಗೂರು ರಾಮಣ್ಣ, ಸುಮತಿ, ಶೇಷಣ್ಣ, ಬೋರೇಗೌಡ, ಏಜಾಸ್ ಮುಂತಾದವರು ಇದ್ದರು.
Comments are closed.