ತುಮಕೂರು: ಕರ್ನಾಟಕ ರಾಜ್ಯ ಅಂಗವಿಕಲರ ಸಂಸ್ಥೆ, ಬೆಂಗಳೂರು ಹಾಗೂ ತುಮಕೂರು ಜಿಲ್ಲಾ ಅಂಗವಿಕಲರ ಕ್ರೀಡಾಸಂಸ್ಥೆ, ತುಮಕೂರು ಇವರ ಜಂಟಿಯಾಗಿ ಜುಲೈ 14 ರಿಂದ 17ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜರುಗುವ 13ನೇ ರಾಷ್ಟ್ರೀಯ ಅಂಗವಿಕಲರ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜರುಗಿತ್ತು.
ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಆರ್.ಮಹೇಶಗೌಡ, ತುಮಕೂರು ಜಿಲ್ಲಾ ಅಂಗವಿಕಲರ ಕ್ರೀಡಾ ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಕ್ರೀಡಾ ತರಬೇತುದಾರ ಇಸ್ಮಾಯಿಲ್, ಜಿಲ್ಲಾಧ್ಯಕ್ಷ ಎಂ.ನೀಲಾಂಜನೇಯ, ಪ್ರಧಾನ ಕಾರ್ಯದರ್ಶಿ ವಜ್ರಪ್ಪ, ಜಂಟಿ ಕಾರ್ಯದರ್ಶಿ ರಾಘವೇಂದ್ರ ಹಾಗೂ ಉಪಾಧ್ಯಕ್ಷ ರಾಮಚಂದ್ರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಕರ್ನಾಟಕ ತಂಡ ಆಯ್ಕೆ ಮಾಡುವ ಕಾರ್ಯ ನಡೆಯಿತು.
ಅಂಗವಿಕಲರ ರಾಜ್ಯ ಅಥ್ಲೆಟಿಕ್ ತಂಡದ ಆಯ್ಕೆಯಲ್ಲಿ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಸುಮಾರು 70 ಕ್ಕೂ ಹೆಚ್ಚು ಕ್ರೀಡಾಪಟುಗಳು ಟ್ರಾಕ್ ಮತ್ತು ಪ್ಲೀಡ್ ಇವೆಂಟ್ ಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ತಮ್ಮ ದೈಹಿಕ ಮತ್ತು ಮಾನಸಿಕ ನೂನ್ಯತೆ ಮೀರಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಕ್ರೀಡಾ ಸ್ಪೂರ್ತಿ ಮೆರೆದರು.
ಕ್ರೀಡಾಪಟುಗಳ ಜೊತೆಗೆ ಅವರ ತಂದೆ, ತಾಯಿ ಹಾಗೂ ಪೋಷಕರು ಸಹ ಪಾಲ್ಗೊಂಡು ಮಕ್ಕಳಿಗೆ ಉತ್ಸಾಹ ತುಂಬುವ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಆರ್.ಮಹೇಶ ಗೌಡ, ವಿಕಲಚೇತನ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಅನಾವರಣಗೊಳಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಳೆದ 1995 ರಿಂದಲೂ ಕೆಲಸ ಮಾಡುತ್ತಾ ಬಂದಿದೆ, ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಸ್ಪರ್ಧೆ ಆಯೋಜಿಸಿ, ಕ್ರೀಡಾಪಟುಗಳು ಭಾಗವಹಿಸುವಂತೆ ಮಾಡಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ತುಮಕೂರು ಜಿಲ್ಲಾ ಅಂಗವಿಕಲರ ಕ್ರೀಡಾ ಸಂಸ್ಥೆಯ ಜಿಲ್ಲಾಧ್ಯಕ್ಷ ನೀಲಾಂಜನೇಯ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ನಮ್ಮ ಸಂಸ್ಥೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಇಂತಹ ಆಯ್ಕೆ ಟ್ರಯಲ್ ಆಯೋಜಿಸಿ ವಿಕಲಚೇತನ ಕ್ರೀಡಾಪಟುಗಳನ್ನು ಆಹ್ವಾನಿಸಿ ಅವರಲ್ಲಿರುವ ಕ್ರೀಡಾ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ, ಗೋವಾದಲ್ಲಿ ನಡೆದ 12 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೂ ಸಹ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು, ಈ ಆಯ್ಕೆ ಟ್ರಯಲ್ ನಲ್ಲಿ 14,17 ಮತ್ತು 19 ವರ್ಷದ ಒಳಗಿನ ಎಲ್ಲಾ ತರಹದ ದೈಹಿಕ ಮತ್ತು ಮಾನಸಿಕ ನ್ಯೂನತೆ ಹೊಂದಿರುವ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, ಇಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳು ಜುಲೈ 14 ರಿಂದ 17ವರೆಗೆ ಬೆಂಗಳೂರಿನಲ್ಲಿ ನಡೆಯುವ 13ನೇ ರಾಷ್ಟ್ರೀಯ ಅಂಗವಿಕಲರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಂಗವಿಕಲರ ಅಥ್ಲೆಟಿಕ್ ಕ್ರೀಡಾಕೂಟದ ಆಯ್ಕೆ ಪ್ರಕ್ರಿಯೆಯ ತೀರ್ಪುಗಾರರಾಗಿ ಹಿರಿಯ ಅಥ್ಲೆಟಿಕ್ ತರಬೇತುದಾರರಾದ ಶಿವಪ್ರಸಾದ್ ಮತ್ತು ತಂಡ ಪಾಲ್ಗೊಂಡು, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು.
Comments are closed.