ವೆಂಕಟೇಶ ಪುರದಲ್ಲಿ ಎಣ್ಣೆ ಅಂಗಡಿ ಬೇಡ್ವೇ ಬೇಡ

ಕುಡುಕರ ಹಾವಳಿಗೆ ಬೇಸತ್ತ ನಾಗರಿಕರಿಂದ ಅಧಿಕಾರಿಗಳಿಗೆ ಮನವಿ

39

Get real time updates directly on you device, subscribe now.


ತುಮಕೂರು: ನಗರದ 2ನೇ ವಾರ್ಡ್ನ ಶಿರಾ ಗೇಟ್ ನ ವೆಂಕಟೇಶಪುರದಲ್ಲಿ ಯಾವುದೇ ಕಾರಣಕ್ಕೂ ಮದ್ಯ ದಂಗಡಿ ತೆರೆಯಲು ಅನುಮತಿ ಕೊಡಬೇಡಿ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಗುರುವಾರ ವೆಂಕಟೇಶಪುರದ ನಾಗರಿಕ ಮುಖಂಡರು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು, ಈ ಮೊದಲು ವೆಂಕಟೇಶಪುರದಲ್ಲಿದ್ದ ಮದ್ಯದ ಅಂಗಡಿಯನ್ನು ನಾಗರಿಕರ ಒತ್ತಾಯದ ಮೇರೆಗೆ ಸ್ಥಳಾಂತರಿಸಲಾಗಿದೆ, ಈಗ ಮತ್ತೆ ಮದ್ಯದ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಬಾರದು ಎಂದು ಕೋರಿದರು.

2ನೇ ವಾರ್ಡ್ನ ಬಿಜೆಪಿ ಮುಖಂಡ ಎನ್.ವೆಂಕಟೇಶಾಚಾರ್ ಮಾತನಾಡಿ, ಜನವಸತಿ ಪ್ರದೇಶವಾದ ವೆಂಕಟೇಶಪುರದಲ್ಲಿ ಈ ಮೊದಲು ಮದ್ಯದ ಅಂಗಡಿ ಇತ್ತು, ಮದ್ಯ ಸೇವನೆಗೆಂದು ಇಲ್ಲಿಗೆ ಬರುತ್ತಿದ್ದ ಕುಡುಕರ ಉಪಟಳದಿಂದ ನಾಗರಿಕರು ರೋಸಿ ಹೋಗಿದ್ದರು, ಮದ್ಯದ ಅಂಗಡಿಗೆ ಬಂದವರು ಇಲ್ಲಿನ ಖಾಲಿ ನಿವೇಶನಗಳಲ್ಲಿ ಕುಳಿತು ಮದ್ಯ ಸೇವನೆ, ಮಾದಕ ಪದಾರ್ಥಗಳ ಸೇವನೆ ಮಾಡುತ್ತಾ ಗಲಾಟೆ ಮಾಡಿಕೊಂಡು ಸಾರ್ವಜನಿಕರಿಗೆ ನಿತ್ಯ ತೊಂದರೆ ಮಾಡುತ್ತಿದ್ದರು, ಈ ಬಗ್ಗೆ ಹಲವಾರು ಬಾರಿ ಪೊಲೀಸರಿಗೆ ಜನ ದೂರು ನೀಡಿದ್ದರು ಎಂದು ಹೇಳಿದರು.
ಮದ್ಯ ಸೇವನೆ, ಮಾದಕ ವ್ಯಸನಿಗಳ ಅಡ್ಡೆಯಾಗಿದ್ದ ಈ ಪ್ರದೇಶದಲ್ಲಿ ಅಪರಾಧ ಮತ್ತು ಅಕ್ರಮ ಚಟುವಟಿಕೆ ನಡೆಯುತ್ತಿದ್ದವು, ಸಾರ್ವಜನಿಕರ ಒತ್ತಾಯದ ಮೇರೆಗೆ ಅಧಿಕಾರಿಗಳು ಇಲ್ಲಿದ್ದ ಮದ್ಯದ ಅಂಗಡಿಯನ್ನು ಸ್ಥಳಾಂತರ ಮಾಡಿದ ಮೇಲೆ ಶಾಂತಿ ನೆಲೆಸಿದೆ, ಮತ್ತೆ ಇಲ್ಲಿ ಮದ್ಯದಂಗಡಿ ತೆರೆಯುವ ಪ್ರಯತ್ನ ನಡೆಯಬಹುದು, ಅಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದು ಎಂದು ವೇಂಕಟೇಶಾಚಾರ್ ಮನವಿ ಮಾಡಿದರು.

ಬಿಜೆಪಿ ಮುಖಂಡ ಗೋಕುಲ್ ಮಂಜುನಾಥ್ ಮಾತನಾಡಿ, ವೆಂಕಟೇಶಪುರ ಸಮೀಪದಲ್ಲಿ ಎಪಿಎಂಸಿ ಮಾರುಕಟ್ಟೆ, ದೇವಸ್ಥಾನಗಳು ಇವೆ, ಇಲ್ಲಿಗೆ ಬರುವ ಸಾರ್ವಜನಿಕರು ಕುಡುಕರ ಗಲಾಟೆ, ಅತಿರೇಕದ ವರ್ತನೆಗೆ ಕಿರಿಕಿರಿ ಅನುಭವಿಸುತ್ತಿದ್ದರು, ಮಕ್ಕಳು, ಹೆಣ್ಣು ಮಕ್ಕಳು ಓಡಾಡಲು ಭಯಪಡುವ ಪರಿಸ್ಥಿತಿ ಇತ್ತು, ಅಪರಾಧ ಕೃತ್ಯಗಳೂ ಹೆಚ್ಚಾಗಿದ್ದವು, ಇದೇ ಕಾರಣಕ್ಕೆ ಮದ್ಯದ ಅಂಗಡಿ ಸ್ಥಳಾಂತರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಾಗರಿಕರು ಮನವಿ ಮಾಡಿದ್ದರ ಫಲವಾಗಿ ಅಂಗಡಿಯನ್ನು ಎತ್ತಂಗಡಿ ಮಾಡಲಾಗಿತ್ತು ಎಂದು ಹೇಳಿದರು.
ಮತ್ತೆ ಇಲ್ಲಿ ಮದ್ಯದಂಗಡಿ ತೆರೆಯುವ ಪ್ರಯತ್ನ ನಡೆಯಬಹುದು, ಇದಕ್ಕೆ ಅವಕಾಶ ಮಾಡಿಕೊಡಬಾರದು, ನಾಗರಿಕರು ಶಾಂತಿ, ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳಲ್ಲಿ ವಿನಂತಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ಕೊಪ್ಪಳ್ ನಾಗರಾಜು, ರಾಮಚಂದ್ರ ರಾವ್, ಶಬ್ಬೀರ್ ಅಹ್ಮದ್, ರಾಘವೇಂದ್ರ, ರಫಿಕ್ ಅಹ್ಮದ್, ದತ್ತಾತ್ರೇಯ, ಇಮ್ರಾನ್ ಅಹ್ಮದ್ ಮತ್ತಿತರರು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!