ಕುಣಿಗಲ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳ ಅಭಿವೃದ್ಧಿಗಾಗಿ ಸರ್ಕಾರ ಗಂಗ ಕಲ್ಯಾಣ ಯೋಜನೆಯಡಿ ಅಗತ್ಯ ಕ್ರಮಕೈಗೊಳ್ಳುತ್ತಿದ್ದು ಯೋಜನೆ ಸದುಪಯೋಗ ಪಡಿಸಿಕೊಂಡು ಸಮಗ್ರ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಡಾ.ರಂಗನಾಥ್ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2019- 20 ಮತ್ತು 2020- 21ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪಂಪು, ಮೋಟರ್ ಕೇಬಲ್ ಮತ್ತಿತರೆ ಎಲೆಕ್ಟ್ರಿಕಲ್ ಸಾಮಗ್ರಿ ವಿತರಿಸಿ, ನೀರಾವರಿ ಬೆಳೆ ಬೆಳೆಯಲು ಪ್ರತಿ ವರ್ಷವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಹಿಡುವಳಿದಾರರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಿ ಅದಕ್ಕೆ ಪೂರಕ ಸವಲತ್ತು ನೀಡಲಾಗುತ್ತಿದೆ, ಫಲಾನುಭವಿಗಳು ಬಳಕೆ ಮಾಡಿಕೊಳ್ಳದೆ ನಿರ್ಲಕ್ಷ್ಯವಹಿಸುವುದು ಸರಿಯಲ್ಲ, ಅಧಿಕಾರಿಗಳು ಯೋಜನೆ ಹಾಳಾಗಿದೆಯೇ, ಬೆಳೆದ ಬೆಳೆಗಳೇನು ಎಂಬುದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಸೂಚಿಸಿದರು.
ದಲಿತರು ಸರ್ಕಾರ ಕೊಟ್ಟಂತಹ ಸೌಲಭ್ಯ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.
ಲಿಂಕ್ ಕೆನಲ್ ಕಾಮಗಾರಿ ಪೂರ್ಣಗೊಂಡರೆ ತಾಲ್ಲೂಕಿನ ನೀರಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ, ತಾಲ್ಲೂಕಿನ ಜನರ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಯೋಜನೆಗೆ ಯಾರು ಅಡ್ಡಿಪಡಿಸಬಾರದು, ಪಕ್ಷಾತೀತವಾಗಿ ಸಹಕರಿಸಬೇಕು ಎಂದರು.
ಎಂಟು ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು, ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್, ತಾಲ್ಲೂಕು ವಿಸ್ತಾರಣಾಧಿಕಾರಿ ರೂಪ ಇತರರು ಇದ್ದರು.
Comments are closed.