ಕಾಲೆಳೆದವರಿಗೆ ಅಭಿವೃದ್ಧಿಯ ಉತ್ತರ ನೀಡುವೆ

ತುಮಕೂರು, ರಾಯದುರ್ಗ, ದಾವಣಗೆರೆ ರೈಲ್ವೆ ಯೋಜನೆ ಪೂರ್ಣಗೊಳಿಸುವೆ

72

Get real time updates directly on you device, subscribe now.


ಚಿಕ್ಕನಾಯಕನ ಹಳ್ಳಿ: ಜಲಜೀವನ್ ಮೀಷನ್ ಯೋಜನೆ ಮೂಲಕ ಇಡೀ ರಾಷ್ಟ್ರದಾದ್ಯಂತ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಲಕ್ಷಾಂತರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ತುಮಕೂರು ಜಿಲ್ಲೆಯ 12 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಕೆಲಸ ನಡೆದಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಚಿಕ್ಕನಾಯಕನ ಹಳ್ಳಿಯ ಕನ್ನಡ ಸಂಘದ ವೇದಿಕೆಯ ಸಭಾಂಗಣದಲ್ಲಿ ಚಿಕ್ಕನಾಯಕನ ಹಳ್ಳಿ ನಾಗರಿಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜೀವನೋಪಾಯ ಅಭಿಯಾನದ ಅಡಿಯಲ್ಲಿ ಶೌಚಾಲಯ ನಿರ್ಮಾಣದಂತಹ ಜನೋಪಯೋಗಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಒಂದಾಗಿ ಹೊಸ ರಾಜಕೀಯ ಶಕೆ ಆರಂಭ ಮಾಡಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಒಟ್ಟಾಗಿ ದೇಶದ ಅಭಿವೃದ್ಧಿಗೆ ದುಡಿಯಲಿದ್ದೇವೆ, ಈಗಾಗಲೇ ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ರೂಪುರೇಷೆಗಳನ್ನು ಎರಡು ಪಕ್ಷದವರು ಸೇರಿ ಮಾಡುತ್ತಿದ್ದು, ಇನ್ನು ಮುಂದೆ ರಾಜ್ಯದಲ್ಲಿ ಹೊಸ ಅಭಿವೃದ್ಧಿ ಪರ್ವ ಆರಂಭವಾಗಲಿದೆ, ಹೊರಗಿನವರು ಗೆದ್ದ ಇತಿಹಾಸವಿಲ್ಲ ಎಂದು ಕಾಲೆಳೆಯುತಿದ್ದವರ ನಡುವೆಯೇ ಜಿಲ್ಲೆಯ ಜನತೆ ನನಗೆ 1.79 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ನನಗೆ ಪುರ್ನಜನ್ಮ ನೀಡಿದ್ದೀರಿ, ನಿಮ್ಮ ವಿಶ್ವಾಸಕ್ಕೆ ನಾನು ಚಿರಋಣಿ, ನನ್ನ ಕಾಲೆಳೆದವರಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ಉತ್ತರ ನೀಡಲಿದ್ದೇನೆ ಎಂದು ವಿ.ಸೋಮಣ್ಣ ತಿಳಿಸಿದರು.

ಸಂಸದನಾಗಿ ಒಂದು ತಿಂಗಳಲ್ಲಿ ಹಲವು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದು, ಶಾಸಕ ಸಿ.ಬಿ.ಸುರೇಶಬಾಬು ಅವರ ಕೋರಿಕೆ ಮೇರೆಗೆ ಚಿಕ್ಕನಾಯಕನ ಹಳ್ಳಿಯಿಂದಲೇ ನನ್ನ ಕೆಲಸ ಕಾರ್ಯ ಆರಂಭಿಸಿದ್ದೇನೆ, ಅನಿರೀಕ್ಷಿತವಾಗಿ ಕ್ಷೇತ್ರಕ್ಕೆ ಬಂದ ನನಗೆ ನಿಮ್ಮ ಆಶೀರ್ವಾದ ಬಲದಿಂದ ಇಂದು ಕೇಂದ್ರದ ಮಂತ್ರಿಯಾಗಿದ್ದೇನೆ, ನಾನು ನಿರೀಕ್ಷಿತರಲಿಲ್ಲ, ಎಲ್ಲರ ಅಪಪ್ರಚಾರದ ನಡುವೆಯೂ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ, ನಮ್ಮ ಚರ್ಮ ಸುಲಿದು ಚಪ್ಪಲಿ ಮಾಡಿ ಕೊಟ್ಟರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ, ಬಿಜೆಪಿ ಬೇರೆಯಲ್ಲ, ಜೆಡಿಎಸ್ ಬೇರೆಯಲ್ಲ, ಎರಡು ಒಂದೇ ನಾಣ್ಯದ ಎರಡು ಮುಖಗಳು, ಹಾಗಾಗಿ ತಳಮಟ್ಟದಲ್ಲಿ ಕಾರ್ಯಕರ್ತರು ಮತ್ತಷ್ಟು ಬೆರೆತು ಕೆಲಸ ಮಾಡಬೇಕಿದೆ, ರೈಲ್ವೆ ಮಂತ್ರಿಯಾಗಿ ನಿಮ್ಮ ಎಲ್ಲಾ ಕೋರಿಕೆಗಳನ್ನು ಈಡೇರಿಸಲು ಸಿದ್ಧನಿದ್ದೇನೆ, ರಾಯದುರ್ಗ, ತುಮಕೂರು, ತುಮಕೂರು, ದಾವಣಗೆರೆ ರೈಲ್ವೆ ಯೋಜನೆ ಪೂರ್ಣಗೊಳಿಸುವುದು ನನ್ನ ಗುರಿಯಾಗಿದೆ, ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.

ಚಿಕ್ಕನಾಯಕನ ಹಳ್ಳಿಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಅನುಮೋದನೆ ದೊರಕಿಸುವ ಕೆಲಸ ಮಾಡಲಾಗುವುದು, ಈ ಸಂಬಂಧ ಸಾರಿಗೆ ಮಂತ್ರಿಗಳಾದ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದ ಅವರು ಇದರ ಜೊತೆಗೆ ತಾಲೂಕಿನ 26 ಕೆರೆಗಳಿಗೆ ಭದ್ರ ನೀರು ತುಂಬಿಸುವ ಕೆಲಸ ಮಾಡುತ್ತೇನೆ, ಇಂದು ತಾಲೂಕಿನ 1871 ಸ್ತ್ರಿಶಕ್ತಿ ಸಂಘಗಳಲ್ಲಿ 200 ಸಂಘಗಳಿಗೆ ತಲಾ 1 ಲಕ್ಷ ರೂ. ಸಹಾಯಧನ ನೀಡುವ ಕೆಲಸ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ವ ಸಹಾಯ ಸಂಘಗಳಿಗೆ ಸುತ್ತು ನಿಧಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕನಾಯಕನ ಹಳ್ಳಿ ಶಾಸಕ ಸಿ.ಬಿ.ಸುರೇಶಬಾಬು ಮಾತನಾಡಿ, ಇಂದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ, ಸಂಸದ ಮತ್ತು ಶಾಸಕರು ಒಂದೇ ಪಕ್ಷದವರಿದ್ದರೆ ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯ ಎಂದು ಅರಿತು ಎನ್ ಡಿಎ ಮೈತ್ರಿಕೂಟಕ್ಕೆ ಜಿಲ್ಲೆಯ ಜನ ಆಶೀರ್ವಾ ಮಾಡಿದ್ದಾರೆ, ಅದರ ಫಲವಾಗಿ ವಿ.ಸೋಮಣ್ಣ ಕೇಂದ್ರದ ರೈಲ್ವೆ ಮತ್ತು ಸಣ್ಣ ನೀರಾವರಿ ರಾಜ್ಯ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ, ಈಗಾಗಲೇ ಚಿಕ್ಕನಾಯಕನ ಹಳ್ಳಿ ಮೂಲಕ ರೈಲ್ವೆ ಯೋಜನೆ ಹಾಗೂ ತಾಲೂಕಿಗೆ ಒಂದು ನವೋದಯ ಶಾಲೆ ಬೇಕೆಂಬ ಬೇಡಿಕೆ ನೀಡಿದ್ದೇವೆ, ಪಂಚಾಯಿತಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಇದರಿಂದ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂಜನಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಕಾಡುಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ರಾಜಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು, ಡಿಸಿಸಿ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ರಾಮಚಂದ್ರ, ಯುವ ಮುಖಂಡರಾದ ಕೀರ್ತಿ, ಹರ್ಷ, ಮಾಜಿ ಜಿಪಂ, ತಾಪಂ ಸದಸ್ಯರು ಇದ್ದರು.

Get real time updates directly on you device, subscribe now.

Comments are closed.

error: Content is protected !!