ತುಮಕೂರು: ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವಿವೇಕಾನಂದ ಕ್ರೀಡಾಸಂಸ್ಥೆಯು ವಿವೇಕಾನಂದ ಕಪ್ ಗಾಗಿ ಶನಿವಾರ ಪ್ರೌಢ ಶಾಲಾ ವಿದ್ಯಾರ್ಥಿಗಳ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ ಏರ್ಪಡಿಸಿತ್ತು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ಬಾಲಕರ 16 ಹಾಗೂ ಬಾಲಕಿಯರ 8 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು, ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿಯ ಜೊತೆಗೆ ಪ್ರಥಮ 5001, ದ್ವಿತೀಯ 3001 ಹಾಗೂ ತೃತೀಯ 2001 ರೂ. ನಗದು ಬಹುಮಾನ ನೀಡಲಾಯಿತು.
ಹಿರಿಯ ಕ್ರೀಡಾಪಟು ಧನಿಯಾಕುಮಾರ್ ಪಂದ್ಯಾವಳಿಗೆ ಚಾಲನೆ ನೀಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ 2 ಕೋಟಿ ರೂ. ಅಧಿಕ ಅನುದಾನದಲ್ಲಿ ಈ ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗುತ್ತಿದೆ, ಇಲ್ಲಿ ಖೋ ಖೋ, ಕಬಡ್ಡಿ ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್ ಮತ್ತಿತರ ಕ್ರೀಡೆಗಳನ್ನು ಆಡಲು ಅವಕಾಶ ಮಾಡಿಕೊಡಲಾಗಿದೆ, ನಗರದಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂಬ ಆಶಯದೊಂದಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ನಗರ ಪಾಲಿಕೆ ಸದಸ್ಯೆಯಾಗಿದ್ದ ಗಿರಿಜಾ ಧನಿಯಾಕುಮಾರ್ ಆಸಕ್ತಿಯಿಂದ ಕ್ರೀಡಾಂಗಣದ ಅಭಿವೃದ್ಧಿಗೆ ನೆರವಾದರು ಎಂದರು.
ಕ್ರಿಡಾಂಗಣ ಸ್ವಚ್ಛವಾಗಿಟ್ಟುಕೊಂಡು ಸಮರ್ಪಕವಾಗಿ ಬಳಿಸಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕ್ರೀಡಾಪಟುಗಳಿಗೆ ಮನವಿ ಮಾಡಿದರು.
ವಿವೇಕಾನಂದ ಕ್ರೀಡಾಸಂಸ್ಥೆ ಅಧ್ಯಕ್ಷ ಹೆಚ್.ಡಿ.ಕುಮಾರ್, ಕಾರ್ಯದರ್ಶಿ ವಿನಯ್, ಪೊಲೀಸ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಡಿ.ರಾಜಶೇಖರ್ ಮೊದಲಾದವರು ಭಾಗವಹಿಸಿದ್ದರು.
Comments are closed.