ಗುಬ್ಬಿ: ಕೇಂದ್ರ ಮತ್ತು ರಾಜ್ಯದ ಅಭಿವೃದ್ಧಿಗೆ ನಮ್ಮೆಲ್ಲ ಸಂಸದರು ಜೊತೆಯಾಗಿದ್ದುಕೊಂಡು ಎಲ್ಲರ ಸಹಕಾರ ಪಡೆದುಕೊಂಡು ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲ್ಲೂಕಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಎನ್ ಡಿಎ ವತಿಯಿಂದ ವಿ. ಸೋಮಣ್ಣನವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾನು ಐದಾರು ರಾಜ್ಯಗಳಿಗೆ ತೆರಳಿ ಆಡಳಿತ ನೋಡಬೇಕಿದೆ, ಹಾಗಾಗಿ ರಾಜ್ಯದಲ್ಲಿ ವಾರದ ಕೊನೆಯ ಮೂರು ದಿನಗಳಲ್ಲಿರುತ್ತೇನೆ, ತುಮಕೂರಿಗೆ ಶನಿವಾರ ಬಂದು ಸಾರ್ವಜನಿಕರ ಕುಂದು ಕೊರತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದರು.
ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಈಗಾಗಲೇ ಮಾಡಿದ್ದು ಅವುಗಳ ಮತ್ತಷ್ಟು ಬಲವರ್ಧನೆಗೆ ನರೇಂದ್ರ ಮೋದಿಜಿಯವರ ಮಾರ್ಗದರ್ಶನದಲ್ಲಿ ದೇಶದ ಅಭಿವೃದ್ಧಿಗೆ ನಮ್ಮೆಲ್ಲ ಸಂಸದರು ದೇಶಕ್ಕಾಗಿ ದುಡಿಯುತ್ತೇವೆ ಎಂದ ಅವರು ಹೇಮಾವತಿ ಲಿಂಕ್ ಕೆನಾಲ್ ವಿಚಾರದಲ್ಲಿ ತಾಂತ್ರಿಕ ಸಮಿತಿ ನೇಮಕ ಮಾಡಿದ್ದು ವರದಿ ಬಂದ ನಂತರವೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ತಿಳಿಸಿದ್ದಾರೆ ಮತ್ತು ಮುಖ್ಯಮಂತ್ರಿಗಳ ಜೊತೆಯಲ್ಲೂ ಮಾತನಾಡಿದ್ದೇನೆ, ಒಂದು ಜಿಲ್ಲೆಯ ನೀರನ್ನ ಮತ್ತೊಂದು ಜಿಲ್ಲೆಗೆ ಹರಿಸುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ, ಒಂದು ವಾರದ ನಂತರ ಮತ್ತೊಮ್ಮೆ ಮಾತನಾಡಿ ಸಾಧ್ಯವಾದರೆ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬಹುದು ಯೋಚನೆ ಮಾಡುತ್ತೇನೆ ಎಂದರು.
ಗುಬ್ಬಿ ತಾಲೂಕಿನ ಹಾಗಾಲವಾಡಿ, ಬಿಕ್ಕೆಗುಡ್ಡ ಭಾಗಗಳಿಗೆ ಹೇಮಾವತಿ ಕುಡಿಯುವ ನೀರು ಯೋಜನೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಮತ್ತು ದೊಡ್ಡ ಗುಣಿಯಲ್ಲಿ ನಾನು ಬರುವಾಗ ಅಪಘಾತ ತಡೆಯುವ ಉದ್ದೇಶದಿಂದ ಮೇಲ್ಸು ತುವೆ ನಿರ್ಮಾಣ ಮಾಡಲು ಚಿಂತಿಸಿದ್ದೇನೆ, ಗುಬ್ಬಿ ತಾಲೂಕಿನಲ್ಲಿ ಮುಖಂಡರು ಒಂದಾಗಿ ನಡೆದಲ್ಲಿ ಯಶಸ್ಸು ಸಾಧ್ಯ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನ ಹಳ್ಳಿ ಪ್ರಭಾಕರ್, ತುಮಕೂರು ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ಚಂದ್ರಶೇಖರ್ ಅವರು ಸೋಮಣ್ಣನವರಿಗೆ ಬೆಳ್ಳಿ ಗದೆ ಹಾಗೂ ಮಾಜಿ ಸಚಿವ ಜಿ.ಎಸ್.ಬಸವರಾಜು ಅವರಿಗೆ ಬೆಳ್ಳಿಯ ದೇವರ ಫೋಟೋ ನೀಡಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕ ವೀರಯ್ಯ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಚಂದ್ರಶೇಖರ್ ಬಾಬು, ಯೋಗಾನಂದ ಕುಮಾರ್, ಎಚ್.ಟಿ.ಬೈರಪ್ಪ ಹೊನ್ನಗಿರಿ ಗೌಡ, ಜಿ.ಎನ್.ಬೆಟ್ಟಸ್ವಾಮಿ, ಬ್ಯಾಟರಂಗೇಗೌಡ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಅವರ ಅಭಿಮಾನಿಗಳು ಹಾಜರಿದ್ದರು.
Comments are closed.