ತುಮಕೂರು: ಬಾಣಂತಿಯರನ್ನು ಮನೆಯಿಂದ ಹೊರಗಡೆ ಇಡುವ ಕೆಟ್ಟ ಆಚರಣೆಯನ್ನು ಯಾವುದೇ ಕಾರಣಕ್ಕೂ ಮುಂದುವರೆಸಿಕೊಂಡು ಹೋಗದೆ ತಮ್ಮ ಮನೆಗಳಲ್ಲೇ ಬಾಣಂತಿ ಹಾಗೂ ಮಕ್ಕಳನ್ನು ಸುರಕ್ಷಿತವಾಗಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.
ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದ ಕೃಷ್ಣ ಕುಟೀರದಲ್ಲಿದ್ದ ಬಾಣಂತಿ ಮತ್ತು ಮಕ್ಕಳನ್ನು ಮನೆಗೆ ಸೇರಿಸಿ ಮಾತನಾಡಿ, ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ, ಹೆಣ್ಣು ಮಕ್ಕಳು ವಿದ್ಯಾವಂತರಾಗಿ, ಆರೋಗ್ಯವಂತರಾಗಿ ಮೌಢ್ಯ ರಹಿತ ಸಮಾಜದಲ್ಲಿ ಸಂತೋಷದಿಂದ ಬದುಕಬೇಕು ಎಂಬುದೇ ಆಯೋಗದ ಆಶಯವಾಗಿದೆ ಎಂದು ತಿಳಿಸಿದರು.
ಒಂದು ತಿಂಗಳ ಹಿಂದಷ್ಟೇ ಈ ಗ್ರಾಮಕ್ಕೆ ಭೇಟಿ ನೀಡಿ ಕೃಷ್ಣ ಕುಟೀರದಲ್ಲಿದ್ಧ ಬಾಣಂತಿ ಮತ್ತು ಮಕ್ಕಳ ಆರೋಗ್ಯ ವಿಚಾರಿಸಿ ಮರಳಿ ಅವರ ಮನೆಗೆ ಸೇರಿಸಲು ಅವರ ಕುಟುಂಬ ಮತ್ತು ಗ್ರಾಮಸ್ಥರ ಮನ ಹೊಲಿಸಲಾಗಿತ್ತು, ಆದರೆ ಅವರ ಮನೆಗಳು ಮಳೆ ಬಂದರೆ ಸೋರುವ ಸ್ಥಿತಿಯಲ್ಲಿ ಇದ್ದುದರಿಂದ ಬಾಣಂತಿ ಮತ್ತು ಮಕ್ಕಳನ್ನು ಮನೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ, ತಾಲ್ಲೂಕು ಪಂಚಾಯ್ತಿ, ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯ್ತಿಯವರೊಂದಿಗೆ ಚರ್ಚಿಸಿ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದ್ದು, ಬಾಣಂತಿಯರ ಮನೆಗೆ ಬೇಕಾದ ಸೌಕರ್ಯಗಳನ್ನು ಈಗಾಗಲೇ ಒದಗಿಸಲಾಗಿದೆ, ಕೃಷ್ಣ ಕುಟೀರದಲ್ಲಿದ್ದ ಬಾಣಂತಿಯರಾದ ಶಿವಮ್ಮ, ರಕ್ಷಿತಾ, ಶಾರದಾ ಅವರನ್ನು ಅವರ ಮನೆಗಳಿಗೆ ಸೇರಿಸಲಾಯಿತು ಎಂದು ಹೇಳಿದರು.
ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರನ್ನು ಶಾಲೆಗೆ ಕಳುಹಿಸುವಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ ಅವರು, ಶಾಲಾ ಮಕ್ಕಳು ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು, ಇನ್ನು ಮುಂದೆ ಯಾರೂ ಸಹ ತಮ್ಮ ಮಕ್ಕಳು, ಬಾಣಂತಿಯರನ್ನು ಕೃಷ್ಣ ಕುಟೀರದಲ್ಲಿ ಬಿಡದಂತೆ ಮನವಿ ಮಾಡಿಕೊಂಡು ಅದಕ್ಕೆ ಬೀಗ ಹಾಕಿ, ಕೃಷ್ಣ ಕುಟೀರವನ್ನು ಗ್ರಂಥಾಲಯ ಮಾಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿನಾರಾಯಣ ಅವರಿಗೆ ಕೃಷ್ಣ ಕುಟೀರದ ಬೀಗದ ಕೈ ಅನ್ನು ಹಸ್ತಾಂತರಿಸಿದರು.
ಋತುಮತಿಯಾದ ಹೆಣ್ಣು ಮಕ್ಕಳನ್ನು ಶಾಲಾ ಆವರಣ ಮತ್ತು ಹೊಲಗಳಲ್ಲಿ ಬಿಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಬೇಸರ ವ್ಯಕ್ತಪಡಿಸಿ ಪ್ರತಿ ನಿತ್ಯ ಸಂಜೆ ವೇಳೆಯಲ್ಲಿ ಪೊಲೀಸ್ ಪೇದೆಯೊಬ್ಬರು ಹಟ್ಟಿಯಲ್ಲಿ ಬೀಟ್ ಬಂದು ಪರಿಶೀಲಿಸಬೇಕು, ಒಂದು ವೇಳೆ ಯಾರಾದರೂ ಹೆಣ್ಣು ಮಕ್ಕಳನ್ನು ಹೊರಗಡೆ ಬಿಟ್ಟಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಚೇತನ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ತಹಶೀಲ್ದಾರ್ ಮಂಜುನಾಥ್, ತಾಲ್ಲೂಕ್ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಅಪೂರ್ವ, ತೋವಿನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಿರಿಜಮ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.