ತುಮಕೂರು: ನಗರದ 26ನೇ ವಾರ್ಡಿನ ದೋಬಿ ಘಾಟ್ ಬಳಿ ಆರೋಗ್ಯ ಇಲಾಖೆಯಿಂದ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಮಂಗಳವಾರ ಶಾಸಕ ಬಿ.ಜಿ. ಜ್ಯೋತಿಗಣೇಶ್ ಹಾಗೂ ನಗರ ಪಾಲಿಕೆ ಆಯುಕ್ತರಾದ ಬಿ.ವಿಅಶ್ವಿಜ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಈ ಭಾಗದಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರದ ಬೇಡಿಕೆ ಹೆಚ್ಚಾಗಿದ್ದು ಇಲ್ಲಿ 15 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ, ಇದಕ್ಕಾಗಿ ಆರೋಗ್ಯ ಇಲಾಖೆ ಈಗಾಗಲೇ ಮೊದಲ ಹಂತವಾಗಿ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ, ನಗರ ಪಾಲಿಕೆಯಿಂದ 60 * 80 ಅಡಿಯ ಜಾಗವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಈ ಆಸ್ಪತ್ರೆಯಿಂದ 25, 26, 27 ವಾರ್ಡ್ಗಳ ಹಾಗೂ ಸುತ್ತಮುತ್ತಲ ಪ್ರದೇಶದ ಜನರು ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುತ್ತದೆ, ಆಸ್ಪತ್ರೆ ನಿರ್ಮಾಣಕ್ಕೆ ಇಲಾಖೆ ಅಗತ್ಯ ಸಿದ್ಧತೆ ನಡೆದಿದೆ ಎಂದು ಹೇಳಿದರು.
ನಗರ ಪಾಲಿಕೆ ಆಯುಕ್ತರಾದ ಬಿ.ವಿಅಶ್ವಿಜ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ಹಣ್ಣು, ತರಕಾರಿ, ಹೂವು ವ್ಯಾಪಾರ ನಡೆಸಲು ದೋಬಿಘಾಟ್ ಬಳಿ ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ನಿರ್ಮಾಣ ಮಾಡಿರುವ ವೆಂಡಿಂಗ್ ಜೋನ್ ಉದ್ಘಾಟನೆಯಾಗಿದ್ದರೂ ನಿರೀಕ್ಷಿತ ಸಂಖ್ಯೆಯಲ್ಲಿ ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡಲು ಮುಂದೆ ಬರಲಿಲ್ಲ, ಹೀಗಾಗಿ ಮತ್ತೊಮ್ಮೆ ಬೀದಿಬದಿ ವ್ಯಾಪಾರಿಗಳ ಸಭೆ ನಡೆಸಿ ವೆಂಡಿಂಗ್ ಜೋನ್ ನಲ್ಲಿ ವ್ಯಾಪಾರ ಮಾಡಲು ತಿಳಿಸಲಾಗುವುದು, ಅವರು ಬಾರದಿದ್ದರೆ ಮಹಿಳಾ ಸ್ವಸಹಾಯ ಸಂಘಗಳಿಗೆ ಈ ಸ್ಥಳ ನೀಡಿ ಅವರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ಹೇಳಿದರು.
ದೋಬಿ ಘಾಟ್ ಬಳಿ ಸ್ಮಾಟ್ ಸಿಟಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಶೀಘ್ರವಾಗಿ ಸಾರ್ವಜನಿಕರ ಬಳಕೆಗೆ ತೆರೆಯಲಾಗುವುದು ಎಂದರು.
ನಗರಪಾಲಿಕೆ ಉಪ ಆಯುಕ್ತರಾದ ರುದ್ರಮುನಿ, ಗಿರೀಶ್, ಪಾಲಿಕೆ ಮಾಜಿ ಸದಸ್ಯ ಹೆಚ್.ಮಲ್ಲಿಕಾರ್ಜುನ್, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.
Comments are closed.