ಬಂಡವಾಳ ಶಾಹಿ ವ್ಯವಸ್ಥೆಯಿಂದ ದಿವಾಳಿ ಗ್ಯಾರಂಟಿ

32

Get real time updates directly on you device, subscribe now.


ತುಮಕೂರು: ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರು ವಿರೋಧಿಸಿದ ಕಾರ್ಪೊರೇಟ್ ಜಗತ್ತಿನ ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ಅವಿವೇಕಿಗಳಾಗಿ ಬೌದ್ಧಿಕ ಜ್ಞಾನವನ್ನು ಕಂಪನಿಗಳ ಹಿಡಿತಕ್ಕೆ ಕೊಟ್ಟು ಉಳುವ ಭೂಮಿ ಮಾರಿ ದಿವಾಳಿ ಹೊಂದುತ್ತಿದ್ದೇವೆ ಎಂದು ಕುವೆಂಪು ವಿವಿಯ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ ಭಾರತದ ಸಮಾಜವಾದಿ ಚಳವಳಿಯಲ್ಲಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರ ಪಾತ್ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಅವರು 60ರ ದಶಕದಲ್ಲಿ ಭೂ ಸುಧಾರಣೆ, ಸಹಕಾರಿ ಕೃಷಿ, ಜಾತಿ ರಹಿತ ಸಮಾಜ ನಿರ್ಮಾಣ, ಸರ್ಕಾರಿ ಉತ್ಪಾದನಾ ವ್ಯವಸ್ಥೆಗೆ ಬೆಂಬಲ, ಇಂತಹ ಸಮಾಜವಾದಿ ಪರಿಕಲ್ಪನೆ ಪರಿಚಯಿಸಿದರು, ಸಮಾಜವಾದ, ಸಮತವಾದ, ಸರ್ವೋದಯ ಪರಿಕಲ್ಪನೆಯಲ್ಲಿ ಬದುಕಬೇಕೆಂದು ಹೋರಾಡಿದರು ಎಂದು ತಿಳಿಸಿದರು.
ಸಂವಿಧಾನ ಸಮಾನತೆ ಕಲ್ಪಿಸಿಕೊಟ್ಟರೂ ಸಾಮಾಜಿಕ ವ್ಯವಸ್ಥೆ ಬಡವರನ್ನುಅಸಮಾನತೆಯಿಂದ ನಡೆಸಿಕೊಳ್ಳುತ್ತಿದೆ, ಬಡ ರೈತನ ಕಷ್ಟಗಳನ್ನು ಗಾಳಿಗೆ ತೂರಿ, ಕಂಪೆನಿಯ ಅಧೀನದಲ್ಲಿರುವ ಸರ್ಕಾರಗಳು, ಐಷಾರಾಮಿ ಕೊಠಡಿಗಳಲ್ಲಿ ಕೂತು ನಿಯಮಗಳನ್ನು, ಕಾನೂನುಗಳನ್ನು ರಚಿಸುವ ಅಧಿಕಾರ ಶಾಹಿಗಳ ವಿರುದ್ಧ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಹೋರಾಡಿದರು ಎಂದರು.

ಪ್ರಭುತ್ವದ ವಿರುದ್ಧ ಹೋರಾಡಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ದಶಕಗಳ ಹೋರಾಟ ನಡೆಸಿದರು, ಭವಿಷ್ಯದಲ್ಲಿ ಭೂಮಿ ರಹಿತ ರೈತರಾಗಿ, ಬೇರೊಂದು ದೇಶದ ಅಡಿಯಾಳಾಗಿ ದುಡಿಯುವ ಪರಿಸ್ಥಿತಿ ಬರುತ್ತದೆ ಎಂದು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸರ್ಕಾರಗಳಿಗೆ ಎಚ್ಚರಿಕೆ ನೀಡುತ್ತಲೇ ಬಂದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಹಲವಾರು ರೈತರು ಸ್ವಂತ ಜಮೀನು ಮಾರಿ ಅದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಫಸಲು ಬರುವ ಹೊಲಗಳಲ್ಲೀಗ ಐಷಾರಾಮಿ ರೆಸಾರ್ಟ್ಗಳು ತಲೆಯೆತ್ತುತ್ತಿವೆ, ಪರಿಸರ, ಆಹಾರ, ನೀರು, ಮಣ್ಣು, ಮನಸ್ಸು ಎಲ್ಲವೂ ಮಲಿನವಾಗಿದೆ ಎಂದು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ, ವಿವಿಯ ಪ್ರೊ.ನಂಜುಂಡ ಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಮುನಿರಾಜು.ಎಂ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಜಯಶೀಲ, ಪ್ರಾಧ್ಯಾಪಕ ಡಾ.ರವೀಂದ್ರಕುಮಾರ್.ಬಿ. ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!