ತುಮಕೂರು: ಮಹಾನಗರ ಪಾಲಿಕೆ ವತಿಯಿಂದ ನಗರದ 25, 26 ಹಾಗೂ 27ನೇ ವಾರ್ಡ್ ವ್ಯಾಪ್ತಿಯ ನಾಗರಿಕರ ಕುಂದು ಕೊರತೆ ಆಲಿಸಲು ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಈ ಮೂರು ವಾರ್ಡ್ಗಳ ಸಮಸ್ಯೆಗಳ ಅನಾವರಣಗೊಂಡಿತು.
ನಗರದ 26ನೇ ವಾರ್ಡ್ ವ್ಯಾಪ್ತಿಯ ದೋಬಿಘಾಟ್ ನಲ್ಲಿರುವ ಚಂದ್ರಶೇಖರ್ ಆಜಾದ್ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪಾಲಿಕೆಯಿಂದ ನಡೆದ ಜನಸ್ಪಂದನ ಸಭೆಯಲ್ಲಿ ಮೂರು ವಾರ್ಡ್ ಗಳ ನಾಗರಿಕರು ತಮ್ಮ ತಮ್ಮ ವಾರ್ಡ್ಗಳಲ್ಲಿರುವ ಸಮಸ್ಯೆ ಅನಾವರಣಗೊಳಿಸಿದರು.
ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜ್ಯೋತಿಗಣೇಶ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಹಾಗೂ ಪಾಲಿಕೆ ಅಧಿಕಾರಿಗಳು ಮೂರು ವಾರ್ಡ್ಗಳ ನಾಗರಿಕರ ಕುಂದು ಕೊರತೆ ಆಲಿಸಿ, ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.
ವಾರ್ಡ್ಗಳಲ್ಲಿರುವ ಬೀದಿ ನಾಯಿಗಳ ಹಾವಳಿ, ಕುಡಿಯುವ ನೀರಿನ ಸಮಸ್ಯೆ, ಯುಜಿಡಿ, ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ, ಬೀದಿ ದೀಪ ಸಮಸ್ಯೆ ಸೇರಿದಂತೆ ಅಗತ್ಯ ಮೂಲಭೂತ ಸಮಸ್ಯೆಗಳ ಬಗ್ಗೆ ನಾಗರಿಕರು ಶಾಸಕರು ಹಾಗೂ ಪಾಲಿಕೆ ಆಯುಕ್ತರ ಗಮನ ಸೆಳೆದು ತಮ್ಮ ಅಹವಾಲು ಸಲ್ಲಿಸಿದರು.
ಎಸ್.ಎಸ್.ಪುರಂನ ಕೆಂಪಣ್ಣ ಅಂಗಡಿ ಸರ್ಕಲ್, ತುಮಕೂರು ವಿಶ್ವ ವಿದ್ಯಾಲಯದ ಮುಂಭಾಗ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರ ಸುಗಮ ಓಡಾಟಕ್ಕೆ ತೊಂದರೆಯಾಗುತ್ತಿದೆ, ಈ ಜಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆಯೂ ನಾಗರಿಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನ ಬರುವವರೆಗೂ ನಾಗರಿಕರು ಸಹಕರಿಸಬೇಕು, ವಾರ್ಡ್ಗಳ ಸಮಸ್ಯೆಗಳಿಗೆ ಪಾಲಿಕೆ ಹಾಗೂ ತಾವು ಕೈಲಾದಷ್ಟು ಮಟ್ಟಿಗೆ ಸ್ಪಂದಿಸುತ್ತೇವೆ ಎಂದರು.
ಈಗಾಗಲೇ ಕೋಟ್ಯಂತರ ರೂ. ವಿನಿಯೋಗಿಸಿ ಪ್ರಗತಿಯಲ್ಲಿರುವ 24=7 ಕುಡಿಯುವ ನೀರಿನ ವ್ಯವಸ್ಥೆ ಇನ್ನು ಸಂಪೂರ್ಣಗೊಂಡಿಲ್ಲ, ಹಾಗಾಗಿ ಸಮಸ್ಯೆ ಎದುರಾಗುತ್ತಿದೆ, ಈ ಯೋಜನೆ ಸಂಪೂರ್ಣ ಗೊಳ್ಳಬೇಕಾದರೆ ಸುಮಾರು 60 ಕೋಟಿ ರೂ. ಗಳಿಗೂ ಅಧಿಕ ಹಣ ಅಗತ್ಯವಿದೆ, ಹಾಗಾಗಿ ಪಾಲಿಕೆ ಮತ್ತು ಸರ್ಕಾರದಿಂದ ಸಾಧ್ಯವಾದಷ್ಟು ಮಟ್ಟಿಗೆ ಈ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದರು.
ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಮಾತನಾಡಿ, ವಾರ್ಡ್ ಗಳಲ್ಲಿ ಚರಂಡಿಗಳ ಸ್ವಚ್ಛತೆ ಕಾಪಾಡಲಾಗುತ್ತಿದೆ, ಜೊತೆಗೆ ಫಾಗಿಂಗ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ, ನಗರದಲ್ಲಿ 500 ಪಾರ್ಕ್ಗಳಿದ್ದು, ಇವುಗಳನ್ನು ನಿರ್ವಹಣೆ ಮಾಡಲು ಪಾಲಿಕೆಯಲ್ಲಿ ಅಗತ್ಯ ಸಿಬ್ಬಂದಿಯಿಲ್ಲ, ಹಾಗಾಗಿ ನಿರ್ವಹಣೆ ಕಷ್ಟವಾಗುತ್ತಿದೆ, ಸ್ಮಾರ್ಟ್ ಸಿಟಿ ವತಿಯಿಂದ ಕೆಲ ಪಾರ್ಕ್ ಗಳನ್ನು ನಿರ್ವಹಣೆ ಮಾಡಲಾಗುತ್ತಿದೆ, ಪಾರ್ಕ್ ಗಳ ನಿರ್ವಹಣೆ ಮಾಡುವುದಾಗಿ ಮುಂದೆ ಬಂದರೆ ಪಾಲಿಕೆ ಸಹ ಸಹಕಾರ ನೀಡಲಿದೆ ಎಂದರು.
ಸಭೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಉಪ ಆಯುಕ್ತರಾದ ರುದ್ರಮುನಿ, ಗಿರೀಶ್, ಕಾರ್ಯ ನಿರ್ವಾಹಕ ಇಂಜಿನಿಯರ್ ಗಳಾದ ವಿನಯ್, ಸಂದೀಪ್, ಆರೋಗ್ಯಾಧಿಕಾರಿ ಡಾ.ವೀರೇಶ್ ಮತ್ತಿತರರು ಪಾಲ್ಗೊಂಡಿದ್ದರು.
Comments are closed.