ಕುಣಿಗಲ್: ತಾಲೂಕಿಗೆ ಹಂಚಿಕೆಯಾಗಿರುವ ಹೇಮಾವತಿ ನೀರಿನಲ್ಲಿ ಕಡಿತ ಮಾಡಿ ಮಾಗಡಿಗೆ ನೀರು ಹಂಚಿಕೆ ಮಾಡುವ ಮೂಲಕ ಶಾಸಕರು, ಮಾಜಿ ಸಂಸದರು, ಡಿಸಿಎಂ ತಾಲೂಕಿನ ಜನತೆಗೆ ಅನ್ಯಾಯ ಮಾಡಿ ಮರಣ ಶಾಸನ ಬರೆದಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರಿನಲ್ಲಿ 2024ರ ಮಾರ್ಚ್ ನಾಲ್ಕರಂದು ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆಯ ನಡಾವಳಿ ಉಲ್ಲೇಖಿಸಿ ಜಿಲ್ಲೆಗೆ 25 ಟಿಎಂಸಿ ನೀರು ಹಂಚಿಕೆಯಾಗಿದ್ದು ತಾಲೂಕಿಗೆ 3.03 ಟಿಎಂಸಿ ಹಂಚಿಕೆಯಾಗಿದೆ, ಶಾಸಕ ಬಿ.ಸುರೇಶ್ ಗೌಡ ಮಂಡಿಸಿದ ಪ್ರಶ್ನೆಗೆ ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ 3.03 ಟಿಎಂಸಿ ಪೈಕಿ ಕಡಿತಮಾಡಿ ಅರ್ಧ ಟಿಎಂಸಿ ನೀರು ಮಾಗಡಿಗೆ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳೇ ಹೇಳಿಕೆ ಕೊಟ್ಟಿದ್ದಾರೆ, ಕುಣಿಗಲ್ ತಾಲೂಕಿಗೆ ಹೇಮಾವತಿ ನೀರಿನ ಕೊರತೆ ಇರಬೇಕಾದರೆ ತಾಲೂಕಿನ ನೀರನ್ನೆ ಬೇರೆ ತಾಲೂಕಿಗೆ ಹಂಚಿಕೆ ಮಾಡಿರುವುದು ಖಂಡನೀಯ ಎಂದರು.
ಶಾಸಕ ಡಾ.ರಂಗನಾಥ, ತಮ್ಮಸಂಬಂಧಿ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ರಾಜಕೀಯ ತೆವಲಿಗೆ ತಾಲೂಕಿನ ನೀರನ್ನು ಬಲಿ ಕೊಟ್ಟಿದ್ದಾರೆ, ತಾಲೂಕಿನ, ಜಿಲ್ಲೆಯ ಯಾವುದೇ ಜೆಡಿಎಸ್, ಬಿಜೆಪಿ ನಾಯಕರು, ಶಾಸಕರು ಜಿಲ್ಲೆಯ ನೀರನ್ನು ಬೇರಡೆಗೆ ತೆಗೆದುಕೊಂಡು ಹೋಗಲು ವಿರೋಧಿಸಿದ್ದಾರೆ, ತಾಲೂಕಿನ ಪಾಲಿನ 3.03 ಟಿಎಂಸಿ ನೀರನ್ನು ಪಡೆದು ಹೆಚ್ಚುವರಿ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗಲಿ, ಆದರೆ ಶಾಸಕರು ಈ ಕೆಲಸ ಮಾಡದೆ ಎರಡೂ ತಾಲೂಕಿನ ಜನರನ್ನು ಎತ್ತಿಕಟ್ಟಿ ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ ಎಂದರು.
ತಾಲೂಕಿನ ಕಾಂಗ್ರೆಸ್ ಮುಖಂಡರಿಗೆ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶಾಸಕರಿಗೆ ಮತ ನೀಡಲಿ, ಆದರೆ ತಾಲೂಕಿನ ಪಾಲಿನ ನೀರನ್ನು ಬೇರೆಡೆ ಹರಿಸುವ ಬಗ್ಗೆ ಮಾಹಿತಿ ಹೊಂದಬೇಕಿದೆ, ವಿನಾಕಾರಣ ಜಿಲ್ಲೆಯ ಶಾಸಕರಾದ ಸುರೇಶ್ ಗೌಡ, ಕೃಷ್ಣಪ್ಪ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ, ಕಳೆದ ಏಳು ವರ್ಷಗಳಿಂದ ಹೇಮೆ ಮೂಲ ಯೋಜನೆ ಯಂತೆ ಕಸಬಾ, ಹುಲಿಯೂರು ದುರ್ಗ ಕಡೆ ನೀರು ಹರಿಸುವ ಮುಖ್ಯನಾಲೆಯ ವಿತರಣೆ ನಾಲೆಯ ಕೆಲಸ ಮಾಡಿಸಿಲ್ಲ, ಆಗಿರುವ ಕಾಮಗಾರಿಗೆ ಹಣ ಕೊಡಿಸಿಲ್ಲ, ಹೊಸ ಯೋಜನೆ ಮೂಲಕ ತಾಲೂಕಿಗೆ ಅನ್ಯಾಯ ಮಾಡುತ್ತಾ ಮತನೀಡಿದ ಮತದಾರರಿಗೆ ದ್ರೋಹ ಬಗೆದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಲ್.ಹರೀಶ್, ಮಂಜುನಾಥ, ತರೀಕೆರೆ ಪ್ರಕಾಶ, ಜಯಣ್ಣ, ನಿಡಸಾಲೆ ಯೋಗೇಶ್, ಮನೋಜ್ ಇತರರು ಇದ್ದರು.
Comments are closed.